Rashmika Mandanna: ದಕ್ಷಿಣ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಟ್ರೋಲ್ ಆಗ್ತಿದ್ದ ನಟಿ ಅಂದ್ರೆ ಅದು ರಶ್ಮಿಕಾ ಮಂದಣ್ಣ (Rashmika Mandanna) ಅಂತ ಯಾವುದೇ ಅನುಮಾನ ಇಲ್ಲದೇ ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ರಶ್ಮಿಕಾನ ಟ್ರೋಲ್ ಮಾಡೋದು ಸಾಕಷ್ಟು ಕಡಿಮೆ ಸಹಾ ಆಗಿದೆ. ನಟಿ ರಶ್ಮಿಕಾ ಪ್ರಸ್ತುತ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಇವೆಲ್ಲವುಗಳ ನಡುವೆ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಹೊಸ ಪೋಸ್ಟ್ ವೈರಲ್ ಆಗಿದೆ.
ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯ ಮದುವೆಗಾಗಿ ಕೊಡಗಿಗೆ (Kodagu) ಬಂದಿದ್ದರು. ಅಂದು ಕೊಡವರ ಶೈಲಿಯಲ್ಲಿ ಸೀರೆಯುಟ್ಟು ಅಭಿಮಾನಿಗಳಿಗೆ ಖುಷಿ ನೀಡಿದ್ದ ರಶ್ಮಿಕಾ ಈಗ ಅದೇ ಸಂದರ್ಭದಲ್ಲಿ ಸೀರೆಯುಟ್ಟು ಕೊಡವ ಭಾಷೆಯಲ್ಲಿ ಮಾತನಾಡಿದ್ದು, ಎಲ್ಲರಿಗೂ ನಲ್ಲಮೆ (ಎಲ್ಲರಿಗೂ ನಲ್ಮೆಯ ನಮಸ್ಕಾರ) ಎಂದು ಹೇಳ್ತಾ ಎಲ್ಲರ ಗಮನವನ್ನು ಸೆಳೆದಿದ್ದು ಕೊಡಗಿನ ಜನರ ಮನಸ್ಸನ್ನು ಗೆದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ ರಶ್ಮಿಕಾ.
ಇಲ್ಲಿಯವರೆಗೆ ನನಗೆ ನಿಮ್ಮ ಆಶೀರ್ವಾದ ದೊರಕಿದೆ. ಮುಂದೆಯೂ ನಿಮ್ಮ ಆಶೀರ್ವಾದ ದೊರಕಲಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಇಲ್ಲಿವರೆಗೆ ಕಾವೇರಮ್ಮ ಮತ್ತು ಇಗ್ಗುತ್ತಪ್ಪನ ಸ್ವಾಮಿಯ ಆಶೀರ್ವಾದ ನನಗೆ ಸಿಕ್ಕಿದೆ. ನೀವೆಲ್ಲರೂ ನನಗೆ ಬೆಂಬಲ ನೀಡುತ್ತಾ ಇದ್ದೀರಿ ಅದೇ ರೀತಿ ಬೆಂಬಲವನ್ನು ಮುಂದೆಯೂ ನೀಡುತ್ತಿರಿ ಎನ್ನುವ ಮಾತುಗಳನ್ನು ರಶ್ಮಿಕಾ ತಮ್ಮ ವೀಡಿಯೋದಲ್ಲಿ ಹೇಳಿದ್ದಾರೆ.
ನಟಿ ಶೇರ್ ಮಾಡಿದ ವೀಡಿಯೋ ನೋಡಿ ಬೇರೆ ಭಾಷೆಯ ಅಭಿಮಾನಿಗಳಿಗೆ ನಟಿ ಮಾತನಾಡುತ್ತಿರುವುದು ಯಾವ ಭಾಷೆ ಎಂದು ಗೊಂದಲವಾಗಿದೆ. ಕೆಲವರು ಅದನ್ನೇ ಕನ್ನಡ ಎಂದುಕೊಂಡು ಇದು ಕನ್ನಡವಾದರೂ ಅರ್ಥ ಆಗ್ತಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರು ಇದು ಕನ್ನಡ ಅಲ್ಲ, ಕೊಡಗಿನ ಜನರ ಭಾಷೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ನಟಿ ಎಷ್ಟು ಬೆಳೆದರೂ ತಮ್ಮ ನೆಲದ ಸಂಸ್ಕೃತಿ ಮರೆತಿಲ್ಲ ಎಂದು ಅನೇಕರು ಮೆಚ್ಚುಗೆ ನೀಡಿದ್ದಾರೆ.