Kannada Serials: ಸಿನಿಮಾಗಳಲ್ಲಿ ನಾಯಕಿ ಪ್ರಧಾನ ಕಥೆ ಇದೆ ಅಂದಾಗ ಅಲ್ಲಿ ನಾಯಕಿಯಲ್ಲಿ ಒಂದು ಆತ್ಮವಿಶ್ವಾಸ, ಧೈರ್ಯದಿಂದ ಮಾತನಾಡುವ ವಿಧಾನ, ಕೆಟ್ಟವರನ್ನು ಸದೆ ಬಡಿಯುವ ದಿಟ್ಟತನ, ಹೊಸ ಹೊಸ ಕೌಶಲ್ಯಗಳ ಮೂಲಕ ಜೀವನದಲ್ಲಿ ಮುಂದೆ ಸಾಗುವ ದಿಟ್ಟ ಹೆಣ್ಣನ್ನು ತೋರಿಸಲಾಗುತ್ತದೆ. ಆದರೆ ಸೀರಿಯಲ್ ಗಳಲ್ಲಿ (Kannada Serials) ನಾಯಕಿಯರಿಗೆ ಅಂತದೊಂದು ದಿಟ್ಟತನ ಬರೋದಕ್ಕೆ ವರ್ಷಗಳೇ ಕಳೆದು ಹೋಗುತ್ತದೆ. ಸೀರಿಯಲ್ ಗಳಲ್ಲಿ ವಿಲನ್ ಗಳ ಅಟ್ಟಹಾಸಕ್ಕೆ ನಾಯಕಿ ಕಣ್ಣೀರಿನ ಕೋಡಿಯನ್ನು ಹರಿಸುವುದು ಬಹುತೇಕ ಎಲ್ಲ ಸೀರಿಯಲ್ ಗಳಲ್ಲೂ ಸಾಮಾನ್ಯವಾಗಿದೆ.
ಇತ್ತೀಚೆಗೆ ಸೀರಿಯಲ್ ಗಳಲ್ಲಿ ನಾಯಕಿಯರು ಪೆದ್ದುಗಳು ಎನ್ನುವಂತೆ ಪ್ರೇಕ್ಷಕರಿಗೆ ಕಾಣುತ್ತಿದ್ದು, ಅವರ ಪೆದ್ದುತನ ನೋಡಿ ಪ್ರೇಕ್ಷಕರು ಕೂಡಾ ರೋಸಿ ಹೋಗಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ವಾಹಿನಿಗಳು ಹಂಚಿಕೊಳ್ಳುವ ಪ್ರೊಮೊಗಳಿಗೆ ಕಾಮೆಂಟ್ ಗಳನ್ನು ಮಾಡುತ್ತಾ ಬಹಳಷ್ಟು ಜನ ತಮ್ಮ ಅಸಮಾಧಾನ, ಸಿಟ್ಟು ವ್ಯಕ್ತಪಡಿಸುತ್ತಿದ್ದರು. ಬಹುಶಃ ಇವೆಲ್ಲವುಗಳ ಪರಿಣಾಮ ಎನ್ನುವಂತೆ ಈಗ ಕೆಲವು ಧಾರಾವಾಹಿಗಳಲ್ಲಿ ನಾಯಕಿಯ ಪಾತ್ರದ ಔಚಿತ್ಯ ಸ್ವಲ್ಪ ಮಟ್ಟಿಗೆ ಬದಲಾಗಿರುವುದು ಪ್ರೇಕ್ಷಕರಿಗೆ ಖುಷಿಯನ್ನು ನೀಡುತ್ತಿದೆ.
ಸದಾ ಅಳುತ್ತಾ ತಾನೊಬ್ಬ ಬಲಹೀನ ಹೆಣ್ಣು ಎನ್ನುವಂತೆ ಕಾಣುತ್ತಿದ್ದ ಭಾಗ್ಯಾ ಈಗ ತನ್ನ ಪ್ರತಿಭೆಯಿಂದಾಗಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಉದ್ಯೋಗವನ್ನು ಸಂಪಾದಿಸಿದ್ದು, ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ (Bhagya Lakshmi) ನಾಯಕಿ ಇನ್ನಾದ್ರು ದಿಟ್ಟ ಹೆಜ್ಜೆಯನ್ನು ಇಡಬಹುದು ಎನ್ನುವ ನಿರೀಕ್ಷೆಯಲ್ಲಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಭೂಮಿಕಾಗೆ ಮನೆಯಲ್ಲಿ ಇರುವ ವಿಲನ್ ಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲವಾದರೂ ತಿಳಿಯುವ ಹಾಗೂ ಅವರ ತಂತ್ರಗಳಿಗೆ ಪ್ರತಿ ತಂತ್ರಗಳನ್ನು ಹೂಡುತ್ತಾ ಮಾಡುವ ಕಾರ್ಯವೈಖರಿ ಪ್ರೇಕ್ಷಕರಿಗೆ ಖುಷಿ ನೀಡಿದೆ.
ಶ್ರೀರಸ್ತು ಶುಭಮಸ್ತು (Srirastu Shubhamastu) ಸೀರಿಯಲ್ ನಲ್ಲಿ ನಾಯಕಿ ತುಳಸಿ ಮಾಧವನ ಮನೆಗೆ ಬಂದ ಮೇಲೆ ಸದಾ ಕಣ್ಣೀರನ್ನು ಹಾಕುತ್ತಾ, ಚಿಂತೆಯಲ್ಲಿ ಇದ್ದ ಪಾತ್ರ ನೋಡಿ ಪ್ರೇಕ್ಷಕರು ಬೇಸರ ಪಡುವಾಗಲೇ ಅಲ್ಲೂ ದೊಡ್ಡ ಬದಲಾವಣೆಯಾಗಿದೆ. ತುಳಸಿ ಡ್ಯಾನ್ಸ್, ಕಲಿತಾಗಿದೆ, ಡ್ರೈವಿಂಗ್ ಕಲಿತು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಮಾತ್ರವೇ ಅಲ್ಲದೇ ಇಂಗ್ಲಿಷ್ ಕಲಿತು ಮಾತನಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದು, ಈ ಪಾತ್ರ ಬಹಳಷ್ಟು ಜನ ಮಹಿಳೆಯರಿಗೆ ಸ್ಪೂರ್ತಿ ಅಂತಿದ್ದಾರೆ ಪ್ರೇಕ್ಷಕರು.
ಸತ್ಯ (Sathya) ಸೀರಿಯಲ್ ನಲ್ಲಿ ನಾಯಕಿ ಸತ್ಯ ಮದುವೆಯಾದ ನಂತರ ಅತ್ತೆ ಮನೆಯವರ ನೆರವು ಪಡೆದು ಓದಿ ಪೊಲೀಸ್ ಅಧಿಕಾರಿಯಾಗಿದ್ದಾಳೆ. ಆ ರೋ ಪಿಯೊಬ್ಬನಿಗೆ ಪಾಠ ಕಲಿಸಲು ದಿಟ್ಟ ಹೆಜ್ಜೆಯನ್ನು ಮುಂದೆ ಇಟ್ಟಿದ್ದಾಳೆ. ಹೀಗೆ ನಾಲ್ಕು ಸೀರಿಯಲ್ ಗಳಲ್ಲಿ ನಾಯಕಿಯ ಪಾತ್ರದಲ್ಲಿ ಆದ ಬದಲಾವಣೆ ಈಗ ಪ್ರೇಕ್ಷಕರಿಗೆ ಸಮಾಧಾನ ನೀಡಿದ್ದು, ಮುಂದೆ ಇದು ಹೀಗೆ ಇರುತ್ತಾ ಕಾದು ನೋಡಬೇಕಾಗಿದೆ.