Thalapathy Vijay: ನೀಟ್ ಯೂಜಿ-2024 (NEET UG 2024) ಪರೀಕ್ಷೆಯ ಪೇಪರ್ ಲೀಕ್ ಆದ ವಿಚಾರವು ಇಡೀ ದೇಶದಲ್ಲೊಂದು ಸಂಚಲನವನ್ನು ಸೃಷ್ಟಿಸಿದ್ದು ಎಲ್ಲರಿಗೂ ತಿಳಿದಿರುವಂತಹ ವಿಚಾರವೇ ಆಗಿದೆ. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ ಹಾಗೂ ಅಸಮಾಧಾನ ಮತ್ತು ಆಕ್ರೋಶಗಳು ಹೊರ ಬರುತ್ತಲೇ ಇದೆ. ಇವೆಲ್ಲವುಗಳ ಬೆನ್ನಲ್ಲೇ ತಮಿಳು ನಟ ದಳಪತಿ ವಿಜಯ್ (Thalapathy Vijay) ಅವರು ಇದೇ ವಿಚಾರವಾಗಿ ಮಾತನಾಡಿದ್ದಾರೆ.
ಪಾರ್ಟಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದಳಪತಿ ವಿಜಯ್ ಅವರು, ಜನರಿಗೆ ನೀಟ್ ಪರೀಕ್ಷೆಗಳ ಮೇಲಿನ ನಂಬಿಕೆ ಹೊರಟು ಹೋಗಿದೆ. ದೇಶಕ್ಕೆ ನೀಟ್ ಪರೀಕ್ಷೆಗಳ ಅಗತ್ಯ ಇಲ್ಲ. ನೀಟ್ ನಿಂದ ವಿನಾಯಿತಿ ಸಿಗುವುದೊಂದೇ ಈ ಸಮಸ್ಯೆಗೆ ಪರಿಹಾರವಾಗಿದೆ.
ಸಂಸತ್ತಿನಲ್ಲಿ ನೀಟ್ ಪರೀಕ್ಷೆಗಳಿಗೆ ವಿರೋಧವಾಗಿ ಅನುಮೋದಿಸಿದ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ತಮಿಳು ನಾಡು ಜನರ ಭಾವನೆಗಳನ್ನು ಕೇಂದ್ರ ಸರ್ಕಾರವು ಗೌರವಿಸಬೇಕೆಂದು ನಾನು ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಶಿಕ್ಷಣವನ್ನು ಸಮವರ್ತಿ ಪಟ್ಟಿಯಿಂದ ರಾಜ್ಯಪಟ್ಟಿಗೆ ವರ್ಗಾವಣೆ ಮಾಡಬೇಕಾಗಿದೆ.
ಮಧ್ಯಂತರ ಪರಿಹಾರವಾಗಿ ಭಾರತೀಯ ಸಂವಿಧಾನದಲ್ಲಿ ವಿಶೇಷ ಸಮವರ್ತಿ ಪಟ್ಟಿಯನ್ನು ರಚಿಸಲು ತಿದ್ದುಪಡಿಯನ್ನು ಮಾಡಬೇಕಾಗಿದೆ. ಅದರ ಅಡಿಯಲ್ಲಿ ಶಿಕ್ಷಣ ಮತ್ತು ಆರೋಗ್ಯವನ್ನು ಸೇರಿಸಬೇಕು ಎಂದು ನಟ, ಟಿವಿಕೆ ಪಾರ್ಟಿಯ ಮುಖ್ಯಸ್ಥರೂ ಆಗಿರುವಂತಹ ದಳಪತಿ ವಿಜಯ್ ಹೇಳಿದ್ದಾರೆ.