Actor Nagarjuna: ತೆಲುಗು ಸಿನಿಮಾ ರಂಗದಲ್ಲಿ ಯುವ ಸಾಮ್ರಾಟ್ ಎನ್ನುವ ಖ್ಯಾತಿಯನ್ನು ಗಳಿಸಿರುವ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ (Actor Nagarjuna) ಹಿರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಸಾಕಷ್ಟು ಜನ ಅಭಿಮಾನಿಗಳನ್ನು ಪಡೆದುಕೊಂಡಿರುವ ಈ ನಟ ತೆಲುಗು ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಕೆಲವು ದಿನಗಳ ಹಿಂದೆ ನಟ ನಾಗಾರ್ಜುನ ಅವರನ್ನು ಭೇಟಿಯಾಗಲು ಬಂದಿದ್ದಂತಹ ಅಂಗವಿಕಲ ಅಭಿಮಾನಿಯನ್ನು ನಟನ ಬಾಡಿಗಾರ್ಡ್ ತಳ್ಳಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ನಡೆದಿತ್ತು.
ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವೀಡಿಯೋ ನೋಡಿದ ಮೇಲೆ ನೆಟ್ಟಿಗರು ನಟ ನಾಗಾರ್ಜುನ ವಿರುದ್ಧ ಅಸಮಾಧಾನವನ್ನು ಹೊರ ಹಾಕುತ್ತಾ, ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಇದಾದ ನಂತರ ಭಾನುವಾರ ನಾಗಾರ್ಜುನ ಅವರು ಒಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಯಲ್ಲಿ ಕ್ಷಮೆ ಯಾಚಿಸಿದರು. ಇದು ನನ್ನ ಗಮನಕ್ಕೆ ಬಂದಿದೆ, ಆ ರೀತಿ ಆಗಬಾರದಾಗಿತ್ತು. ನಾನು ಆ ವ್ಯಕ್ತಿಯ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದರು.
ಅಲ್ಲದೇ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳುವೆ ಎನ್ನುವ ಭರವಸೆಯನ್ನು ನೀಡಿದ್ದರು. ಇವೆಲ್ಲವುಗಳ ನಂತರ ಬುಧವಾರ ಜೂನ್ 26ರಂದು ಅವರು ತಮ್ಮ ಬಾಡಿಗಾರ್ಡ್ ತಳ್ಳಿದ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಆತನನ್ನು ಅಪ್ಪಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಇದು ನಿನ್ನ ತಪ್ಪಲ್ಲ, ಕ್ಷಮಿಸಿ ಬಿಡು, ಇದು ನನ್ನ ತಪ್ಪು ಎಂದು ಹೇಳಿದ್ದಾರೆ. ನಾಗಾರ್ಜುನ ಅವರು ಅಭಿಮಾನಿಯನ್ನು ಭೇಟಿ ಮಾಡಿದ ವೀಡಿಯೋ ಈಗ ವೈರಲ್ ಆಗ್ತಿದೆ.
ವೀಡಿಯೋ ನೋಡಿದ ನಂತರ ನಾಗಾರ್ಜುನ ಅವರು ಮಾಡಿದ ಕೆಲಸವನ್ನು ನೆಟ್ಟಿಗರು ಮೆಚ್ಚಿಕೊಂಡರೆ, ಇನ್ನೊಂದು ಕಡೆ ಕೆಲವರು ಬಾಡಿಗಾರ್ಡ್ ಅಂಗವಿಕಲ ಅಭಿಮಾನಿಯನ್ನು ತಳ್ಳಿದ ವೀಡಿಯೋ ವೈರಲ್ ಆದ ಮೇಲೆ ತೋರಿಕೆಗೆ ಹೀಗೆಲ್ಲಾ ನಾಟಕ ಆಡುತ್ತಿದ್ದಾರೆ ಎಂಬುದಾಗಿ ಟೀಕೆ ಮಾಡುತ್ತಿದ್ದಾರೆ. ಪ್ರಸ್ತುತ ನಟ ನಾಗಾರ್ಜುನ ಅವರು ನಿರ್ದೇಶಕ ಶೇಖರ್ ಕಮ್ಮಲ ಅವರ ಕುಬೇರ ಚಿತ್ರದಲ್ಲಿ ನಟಿಸುತ್ತಿದ್ದಾರೆ.