Mahesh Babu: ಟಾಲಿವುಡ್ ನಲ್ಲಿ (Tollywood) ಸೂಪರ್ ಸ್ಟಾರ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಹಿರಿಯ ನಟ, ದಿವಂಗತ ಕೃಷ್ಣ (Krishna) ಅವರ ನಟ ವಾರಸತ್ವವನ್ನು ಮುಂದುವರೆಸಿಕೊಂಡು ಬಂದಿರುವ ನಟನಾಗಿದ್ದು, ತೆಲುಗು ಚಿತ್ರ ಸೀಮೆಯಲ್ಲಿ ತನಗಾಗಿ ಒಂದು ವಿಶೇಷ ಸ್ಥಾನವನ್ನು ಮತ್ತು ವರ್ಚಸ್ಸನ್ನು ಪಡೆದುಕೊಂಡಿದ್ದಾರೆ. ಈ ನಟನನ್ನು ಅಭಿಮಾನಿಸುವ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವಂತಹ ಅವಶ್ಯಕತೆ ಖಂಡಿತ ಇಲ್ಲ.
ಪ್ರಸ್ತುತ ನಟ ಮಹೇಶ್ ಬಾಬು ರಾಜ ಮೌಳಿ ಅವರ ಜೊತೆಗೆ ಹೊಸ ಸಿನಿಮಾ ಒಂದರಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾದ ವಿಚಾರವಾಗಿ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹೊಸ ಲುಕ್ ನೊಂದಿಗೆ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳ ಮುಂದೆ ಬರುವುದಕ್ಕೋಸ್ಕರ ದೇಹವನ್ನು ದಂಡಿಸುವ ಜೊತೆಗೆ ಹೊಸ ಹೇರ್ ಸ್ಟೈಲ್ ಕಡೆಗೂ ಗಮನವನ್ನು ಕೊಟ್ಟಿದ್ದಾರೆ. ಹಾಲಿವುಡ್ ಸಿನಿಮಾಗಳಿಗೆ ಸವಾಲ್ ಹಾಕುವ ರೀತಿಯಲ್ಲಿ ಹೊಸ ಸಿನಿಮಾ ಮಾಡುವುದಕ್ಕೆ ಬಾಹುಬಲಿ ನಿರ್ದೇಶಕ ರಾಜಮೌಳಿ ತಯಾರಿ ನಡೆಸಿದ್ದಾರೆ.
ಇವೆಲ್ಲವುಗಳ ನಡುವೆ ಮಹೇಶ್ ಬಾಬು ಅವರು ಸಿನಿಮಾವೊಂದನ್ನು ಹತ್ತು ಇಪ್ಪತ್ತು ಸಾರಿ ಅಲ್ಲ ಬರೋಬ್ಬರಿ 100 ಬಾರಿ ವೀಕ್ಷಣೆ ಮಾಡಿದ್ದಾರೆ ಎನ್ನುವ ಮಾತನ್ನು ಇತ್ತೀಚೆಗೆ ಬಂದು ಕಾರ್ಯಕ್ರಮದಲ್ಲಿ ತಾವೇ ಹೇಳಿಕೊಳ್ಳುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ ? ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ. ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರು ನಟ ಮತ್ತು ನಿರ್ಮಾಪಕ ಕೂಡ ಹೌದು.
ಅವರು ತಮ್ಮ ಸ್ವಂತ ಬ್ಯಾನರ್ ಆದಂತಹ ಪದ್ಮಾಲಯ ಸ್ಟುಡಿಯೋಸ್ (Padmalaya Studios) ಅಡಿಯಲ್ಲಿ ಮೋಸಗಾಳ್ಳಕು ಮೋಸಗಾಡು ಎನ್ನುವ ಕೌಬಾಯ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆ ಕಾಲಕ್ಕೆ ಈ ಸಿನಿಮಾ 8 ಲಕ್ಷ ರೂಪಾಯಿಗಳ ಬಜೆಟ್ ನಲ್ಲಿ ನಿರ್ಮಾಣವಾಗಿತ್ತು. ಆದರೆ ಬಿಡುಗಡೆ ನಂತರ ಈ ಸಿನಿಮಾ 50 ಲಕ್ಷ ರೂ. ಕಲೆಕ್ಷನ್ ಮಾಡಿ ಹೊಸ ದಾಖಲೆಯನ್ನು ಬರೆದಿತ್ತು.
ನಂತರ ಈ ಸಿನಿಮಾವನ್ನು ತಮಿಳಿನಲ್ಲಿ ಮೋಸಕಾರನಕ್ಕು ಮೋಸಕಾರನ್ ಮತ್ತು ಹಿಂದಿಯಲ್ಲಿ ಗನ್ ಫೈಟರ್ ಜಾನಿ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. ಅದು ಮಾತ್ರವೇ ಅಲ್ಲದೇ ಇಂಗ್ಲಿಷ್ ನಲ್ಲಿ ದಿ ಟ್ರೆಷರ್ ಹಂಟ್ ಎನ್ನುವ ಹೆಸರಿನಲ್ಲಿ ಡಬ್ ಆದ ಮೊಟ್ಟ ಮೊದಲ ಭಾರತೀಯ ಸಿನಿಮಾ ಎನ್ನುವ ದಾಖಲೆಯನ್ನು ಸಹಾ ಈ ಸಿನಿಮಾ ಬರೆದಿತ್ತು. ಇದೇ ಸಿನಿಮಾವನ್ನು ತಾನು ಕಡಿಮೆ ಎಂದರೂ ನೂರು ಸಲ ನೋಡಿರುವುದಾಗಿ ಹೇಳುವ ಮೂಲಕ ಅಚ್ಚರಿಯನ್ನ ಮೂಡಿಸಿದ್ದಾರೆ ಮಹೇಶ್ ಬಾಬು.