Bollywood Actress: ಸಿನಿಮಾ ರಂಗದಲ್ಲಿ ನಾಯಕಿಯರ ಸಂಭಾವನೆ ವಿಚಾರ ಬಂದಾಗ ಬಾಲಿವುಡ್ ನಲ್ಲಿ ದೀಪಿಕಾ (Deepika Padukone), ನಂತರ ಆಲಿಯಾ ಭಟ್ (Alia Bhat) ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಾದರೆ, ಸೌತ್ ಸಿನಿಮಾ ರಂಗದಲ್ಲಿ ನಯನತಾರಾ (Nayanthara) ಅತಿ ಹೆಚ್ಚು ಸಂಭಾವನೆಯನ್ನು ಪಡೆಯುವ ನಟಿಯರು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಮೂವರನ್ನು ಮೀರಿಸುವಷ್ಟು ಸಂಭಾವನೆ ಪಡೆಯುವ ಮತ್ತೊಬ್ಬ ನಟಿ ಇದ್ದಾರೆ ಅಂದ್ರೆ ನಿಮಗೆ ಅಚ್ಚರಿಯಾಗಬಹುದು.
ಹೌದು, ಭಾರತೀಯ ಸಿನಿಮಾ ರಂಗದ ಈ ನಟಿಯು ಬಹಳಷ್ಟು ಜನ ನಾಯಕ ನಟರಿಗಿಂತಲೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ ಅಂದ್ರೆ ನಂಬೋದಕ್ಕೆ ಕಷ್ಟ ಆದರೂ ಸಹಾ ಇದೇ ಸತ್ಯ. ಹಾಗಾದರೆ ಯಾರು ಈ ನಟಿ? ಎನ್ನುವ ಕುತೂಹಲ ನಿಮಗೆ ಮೂಡಿದ್ದರೆ ಅದಕ್ಕೆ ಉತ್ತರ ಇಲ್ಲೇ ಇದೆ.
ಅತಿ ಹೆಚ್ಚು ಸಂಭಾವನೆಯನ್ನು ಪಡೆಯುವ ಆ ಭಾರತೀಯ ನಟಿ ಮತ್ತಾರೂ ಅಲ್ಲ, ಪ್ರಸ್ತುತ ಹಾಲಿವುಡ್ ನಲ್ಲಿ ಕಮಾಲ್ ಮಾಡುತ್ತಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ (Priyanka Chopra) ಅವರೇ ಅತಿ ಹೆಚ್ಚು ಸಂಭಾವನೆಯನ್ನು ಪಡೆಯುವ ನಟಿಯಾಗಿದ್ದಾರೆ. ದೀಪಿಕಾ, ಆಲಿಯಾಗಿಂತಲೂ ದುಪ್ಪಟ್ಟು ಸಂಭಾವನೆಯನ್ನು ಈ ನಟಿ ಪಡೆಯುತ್ತಾರೆ.
ಪ್ರಿಯಾಂಕ ಚೋಪ್ರ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ ಮೇಲೆ ಅಲ್ಲಿ ಬೇವಾಚ್ ನಲ್ಲಿ ಕಾಣಿಸಿಕೊಂಡರು ಅದು ಭರ್ಜರಿ ಯಶಸ್ಸು ಕಂಡಿತ್ತು. ಅದರ ನಂತರ ಅವರು ‘ಎ ಕಿಡ್ ಲೈಕ್ ಜೇಕ್’, ‘ಈಸ್ ನಾಟ್ ಇಟ್ ರೊಮ್ಯಾಂಟಿಕ್’, ‘ವಿ ಕ್ಯಾನ್ ಬಿ ಹೀರೋಸ್’, ‘ದಿ ಮ್ಯಾಟ್ರಿಕ್ಸ್ ರಿಸರ್ಕ್ಷನ್’ ಮತ್ತು ‘ಲವ್ ಎಗೇನ್’ ಸಿನಿಮಾಗಳಲ್ಲಿ ನಟಿಯು ಪ್ರೇಕ್ಷಕರನ್ನ ರಂಜಿಸಿದರು.
ಪ್ರಿಯಾಂಕ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಪ್ರತಿ ಸಿನಿಮಾಕ್ಕೆ ಬರೋಬ್ಬರಿ 5 ಮಿಲಿಯನ್ ಡಾಲರ್ ಗಳು ಅಂದರೆ ಸುಮಾರು 40 ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇದೇ ವೇಳೆ ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಪ್ರಿಯಾಂಕ 14-20 ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ.