Niranjan Deshpande: ಕನ್ನಡದ ಜನಪ್ರಿಯ ನಟ ಹಾಗೂ ನಿರೂಪಕನಾಗಿರುವ ನಿರಂಜನ್ ದೇಶಪಾಂಡೆ (Niranjan Deshpande) ಅವರು ಕಿರುತೆರೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಕಲಾವಿದನಾಗಿದ್ದಾರೆ. ಅವರೀಗ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ವಿಡಿಯೋ ಒಂದನ್ನು ಮಾಡುವ ಮೂಲಕ ಕನ್ನಡಪರ ಹೋರಾಟಗಾರರ ಬಳಿ ಕ್ಷಮೆಯನ್ನು ಕೇಳಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ನಿರಂಜನ್ ದೇಶಪಾಂಡೆ ಅವರು ಕನ್ನಡಪರ ಹೋರಾಟಗಾರರ ಕುರಿತಾಗಿ ಆಡಿದಂತಹ ಮಾತುಗಳು, ಕನ್ನಡ ಪರ ಹೋರಾಟಗಾರರ ಅರ್ಹತೆಯ ಕುರಿತಾಗಿ ಹೇಳಿದ ವಿಚಾರಗಳು ಸಾಕಷ್ಟು ಅಸಮಾಧಾನಕ್ಕೆ ಕಾರಣವಾದ ಬೆನ್ನಲ್ಲೇ ನಿರಂಜನ್ ಅವರು ಕನ್ನಡ ಪರ ಹೋರಾಟಗಾರರ ಕ್ಷಮೆಯನ್ನು ಕೇಳಿದ್ದಾರೆ.
ಮೈಸೂರಿಗೆ (Mysore) ತೆರಳಿರುವ ನಿರಂಜನ್ ದೇಶಪಾಂಡೆ ಅವರು ಚಾಮುಂಡೇಶ್ವರಿ ತಾಯಿಯ ದರ್ಶನವನ್ನು ಪಡೆಯಲು ಹೋಗುವ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದಿದ್ದು, ತಾನು ನೀಡಿದಂತಹ ಹೇಳಿಕೆಯಿಂದಾಗಿ ವ್ಯಾಪಕವಾಗಿ ಅಸಮಾಧಾನ ವ್ಯಕ್ತವಾಗುತ್ತಿದೆ, ಸಾಕಷ್ಟು ಜನರು ನನ್ನ ಮಾತಿಗೆ ಆಕ್ಷೇಪವನ್ನ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಹೋರಾಟಗಾರರಾದ ಲೋಕೇಶ್ ಅವರೊಟ್ಟಿಗೆ ಮಾತನಾಡಿದೆ. ಅವರು ಸಾಕಷ್ಟು ಹೋರಾಟಗಳನ್ನ ಮಾಡಿದ್ದಾರೆ, ನಾನು ಆಡಿದಂತಹ ಮಾತುಗಳು ತಪ್ಪು ಎನ್ನುವುದನ್ನು ಅವರು ತಿಳಿ ಹೇಳಿದ್ದಾರೆ.
ನನಗೆ ರೂಪೇಶ್ ರಾಜಣ್ಣ (Roopesh Rajanna) ಸೇರಿದಂತೆ ಬಹಳಷ್ಟು ಜನ ಕನ್ನಡಪರ ಹೋರಾಟಗಾರರು ಗೊತ್ತಿದ್ದು ಅವರೊಟ್ಟಿಗೆ ಒಡನಾಟವನ್ನ ಹೊಂದಿದ್ದೇನೆ. ನಾನು ಆ ರೀತಿ ಮಾತನಾಡಬಾರದಿತ್ತು ಎನ್ನುವ ಮಾತನ್ನ ಅವರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ನಿರಂಜನ್ ದೇಶಪಾಂಡೆ ಅವರು ಸಂದರ್ಶನ ಒಂದರಲ್ಲಿ ಮಾತನಾಡುತ್ತಾ, ಕನ್ನಡ ಹೋರಾಟಗಾರರು ಮಾತೆತ್ತಿದರೆ ಸಾಕು ಹೋರಾಟ ಅಂತ ಬಂದು ಬಿಡ್ತಾರೆ. ಕೆಲವರು ಕನ್ನಡವನ್ನ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಒಳ್ಳೆಯ ರೀತಿಯಲ್ಲಿ ಹೋರಾಟಗಳನ್ನು ಮಾಡ್ತಾರೆ.
ಇನ್ನು ಕೆಲವರು ಹೋರಾಟಕ್ಕೆ ಬರ್ತಾರೆ ಆದ್ರೆ ಅವರಿಗೆ ಕನ್ನಡ ಸರಿಯಾಗಿ ಮಾತನಾಡೋದಕ್ಕೂ ಬರೋದಿಲ್ಲ. ಕೆಲವರಿಗೆ ಉಗ್ರ ಹೋರಾಟ ಅಂತ ಹೇಳೋದಕ್ಕೂ ಬರಲ್ಲ, ಹೋರಾಟ ಮಾಡೋ ಮೊದಲು ಕನ್ನಡದ ಜ್ಞಾನವನ್ನು ತುಂಬಿಕೊಳ್ಳಿ ಎನ್ನುವ ಮಾತುಗಳನ್ನ ಹೇಳಿದ್ದರು. ಅವರ ಈ ಮಾತುಗಳು ವೈರಲ್ ಆದ ಮೇಲೆ ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ತಮ್ಮ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ನೆಟ್ಟಿಗರು ಕನ್ನಡದ ಬಗ್ಗೆ ಅಭಿಮಾನ ಪ್ರೀತಿ ಇರಬೇಕೇ ಹೊರತು ಹೋರಾಟ ಮಾಡೋದಕ್ಕೆ ಭಾಷೆಯಲ್ಲಿ ಪಾಂಡಿತ್ಯ ಬೇಕಿಲ್ಲ ಎಂದಿದ್ರು.
ಅಭಿಮಾನ ಇರುವ ಪ್ರತಿಯೊಬ್ಬರೂ ಕೂಡಾ ಕನ್ನಡ ಪರ ಹೋರಾಟಗಾರರೇ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದ್ದವು. ಈ ಎಲ್ಲಾ ವಿಚಾರಗಳ ಬೆನ್ನಲ್ಲೇ ನಿರಂಜನ್ ದೇಶಪಾಂಡೆ ಅವರು ಲೈವ್ ಬಂದಿದ್ದು, ಮಾತಿನ ಭರದಲ್ಲಿ ಏನು ಅಂದುಬಿಟ್ಟೆ, ಕನ್ನಡ ಉಚ್ಚಾರಣೆ ಬಗ್ಗೆ ಗಮನಿಸಬೇಕು ಎಂದು ಹೇಳುವಾಗ ಆ ರೀತಿ ಮಾತನಾಡಿದೆ. ನನಗೆ ಕನ್ನಡ ಅಂದ್ರೆ ಉಸಿರು, ಕನ್ನಡ ತಾಯಿ, ಹಾಗಾಗಿ ಮಾತನಾಡುವಾಗ ತಪ್ಪಾಯ್ತು ಕ್ಷಮಿಸಿ ಎಂದು ಹೇಳಿದ್ದಾರೆ.
ಲೊಕೇಶ್ (Lokesh) ಎನ್ನುವ ಹೋರಾಟಗಾರರು ಈ ವಿಚಾರವಾಗಿ ನನ್ನ ಜೊತೆ ಮಾತನಾಡಿ, ನಾವು ಊಟ ನಿದ್ದೆ ಬಿಟ್ಟು ಹೋರಾಟ ಮಾಡ್ತೀವಿ, ಅಂತಹ ಸಮಯದಲ್ಲಿ ವ್ಯಾಕರಣ ಅದು ಇದು ಅಂತ ಹೇಳ್ತೀರಾ, ಹೋರಾಟ ಮುಖ್ಯನಾ ಅಥವಾ ಹೊರಟ ಮಾಡುವವರಿಗೆ ಎಲ್ಲ ಗೊತ್ತಾ ಅಂತ ಕೇಳೋದು ಎಷ್ಟು ಸರಿ. ಹಳ್ಳಿಯಿಂದ ಬಂದವರಿಗೆ ಅಷ್ಟೇನೂ ಜ್ಞಾನ ಇರೋದಿಲ್ಲ. ಆದರೆ ಅಭಿಮಾನ ಮುಖ್ಯ ಅಲ್ವಾ ಅಂತ ಹೇಳಿದರು. ಅವರ ಮಾತುಗಳನ್ನು ಕೇಳಿದ ಮೇಲೆ ನನಗೂ ಅವರು ಹೇಳಿದ್ದು ಸರಿ ಅನಿಸಿತು ಎಂದು ನಿರಂಜನ್ ಹೇಳಿದ್ದಾರೆ.
ನಾನು ಆಡಿದ ಮಾತುಗಳಿಂದ ಬಹಳಷ್ಟು ಜನ ಕನ್ನಡ ಹೋರಾಟಗಾರರಿಗೆ ಬೇಸರವಾಯಿತು ಅನ್ನೋದು ಗೊತ್ತಾಯ್ತು. ಅದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಿತ್ತು, ಆ ಮಾತನ್ನ ನಾನು ಹೇಳಬಾರದಿತ್ತು. ಹಾಗಾಗಿ ನನಗೂ ಬೇಸರ ಆಗಿದೆ. ನನ್ನನ್ನು ಕೆಟ್ಟ ಪದಗಳಿಂದ ಬೈತಿದ್ದಾರೆ ಆದರೆ ನನಗೆ ಅದರ ಬಗ್ಗೆ ಬೇಸರ ಇಲ್ಲ. ನನ್ನ ತಾಯಿ, ಅಕ್ಕನ ಹೆಸರನ್ನು ತಂದು ಬೈಬೇಡಿ ಅನ್ನೋದಷ್ಟೇ ನನ್ನ ಮನವಿ ಎನ್ನುವ ಮಾತುಗಳನ್ನು ಕೂಡಾ ಅವರು ಈ ವೇಳೆ ಹೇಳಿದ್ದಾರೆ.