Hamsalekha: ಸದ್ಯಕ್ಕಂತೂ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಕ್ರೇಜ್ ಬಹಳ ಜೋರಾಗಿಯೇ ಇದೆ. ಹಲವು ಪ್ರಾದೇಶಿಕ ಭಾಷಾ ಸ್ಟಾರ್ ಗಳು ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಸುದ್ದಿಯನ್ನು ಮಾಡ್ತಿರೋದು ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಅನ್ನೋದು ನಿಜ. ಬಾಲಿವುಡ್ ಗೆ ದಕ್ಷಿಣದ ಸಿನಿಮಾಗಳು ಸೆಡ್ಡು ಹೊಡಿತಿರೋದು ಸಹಾ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ. ಆದರೆ ಕನ್ನಡದ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರಿಗೆ ಈ ಟ್ರೆಂಡ್ ಇಷ್ಟವಾದಂತೆ ಕಾಣ್ತಿಲ್ಲ.
ಹಂಸಲೇಖ ಅವರು ತನ್ನ ಮಾತಿನ ಈಟಿಯಿಂದಲೇ ಈಗ ಪ್ಯಾನ್ ಇಂಡಿಯಾ ಸ್ಟಾರ್ ಗಳನ್ನ ತಿವಿದಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ (Indrajit Lankesh) ಪುತ್ರ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿರುವ ಗೌರಿ ಚಿತ್ರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಂಸಲೇಖ ಅವರು ಪ್ಯಾನ್ ಇಂಡಿಯಾ ಟ್ರೆಂಡ್ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿರುವುದು ಬಹಳ ಸ್ಪಷ್ಟವಾಗಿ ಕಂಡಿದೆ.
ಪ್ಯಾನ್ ಇಂಡಿಯಾ (Pan India) ಅನ್ನೋದು ಹುಚ್ಚು ಎಂದಿರುವ ಹಂಸಲೇಖ ಅವರು, ಇದರಿಂದಾಗಿ ಕನ್ನಡ ಸೂಪರ್ ಸ್ಟಾರ್ ಗಳಿಗೆ ಕನ್ನಡದ ಜೊತೆ ಇಲ್ಲಿನ ಬೇರಿನ ಕನೆಕ್ಷನ್ ಕಟ್ ಆಗಿದೆ, ಪ್ಯಾನ್ ಇಂಡಿಯಾ ಮೂಲಕ, ಭಾರತದಾದ್ಯಂತ ಕನ್ನಡದ ಕಲಾವಿದರು ಖ್ಯಾತ ನಾಯಕರಾಗ್ತಾರೆ ಅನ್ನೋದು ಒಂದು ಭ್ರಮೆ ಎಂದಿದ್ದಾರೆ. ದಕ್ಷಿಣದ ಯಾರಾದ್ರೂ ಹಿರೋಯಿನ್, ಉತ್ತರಕ್ಕೆ ಹೋಗಿ 20 ವರ್ಷ ಬದುಕಬಹುದು.
ಆದರೆ ರಜನಿಕಾಂತ್, ಕಮಲಹಾಸನ್, ಮೋಹನ್ ಲಾಲ್ ಸೇರಿ ದಕ್ಷಿಣದ ಯಾವುದೇ ಸೂಪರ್ ಸ್ಟಾರ್ಸ್ ಗಳು, ಬಾಂಬೆಗೆ ಹೋದ್ರೆ ಅವರು ಅಲ್ಲಿ ಎರಡು ವರ್ಷ ಇರೋದಕ್ಕೆ ಆಗಲ್ಲ. ನಂತರ ಅವರು ತಮ್ಮ ತವರಿಗೆ ವಾಪಸ್ ಬರ್ತಾರೆ ಎಂದಿರುವ ಹಂಸಲೇಖ ಅವರು ನಮ್ಮ ಹೀರೋಗಳು ಹನಿಮೂನ್ ತರ, ಪ್ಯಾನ್ ಇಂಡಿಯಾ ಮೂಲಕ ಒಂದು ಬಾರಿ ಇಂಡಿಯಾನೆಲ್ಲ ಸುತ್ತಾಕಿಕೊಂಡು ಬರ್ಲಿ ಎಂದಿದ್ದಾರೆ.
ಆದ್ರೆ ಅವರು ಎಲ್ಲಿ ಏನು ಸುತ್ತಿದ್ರೂ ಮತ್ತೆ ಕನ್ನಡಕ್ಕೆ ಬರಲೇಬೇಕು ಎಂದಿದ್ದಾರೆ ಹಂಸಲೇಖ. ಇದೇ ವೇಳೆ ಅವರು ನಮ್ಮ ಸ್ಯಾಂಡಲ್ವುಡ್ ಗೆ ಒಂದು ಪರಂಪರೆ ಇದೆ. ಭಾಷೆಯಿಂದಲೇ ಕನ್ನಡ ಚಿತ್ರರಂಗ ಬೆಳೆದ ಪರಂಪರೆ ಇದೆ. ಆ ಪರಂಪರೆಯನ್ನು ಬಿಟ್ಟು ನೀವು ಪ್ಯಾನ್ ಇಂಡಿಯಾಕ್ಕೆ ಹೋದ್ರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ನೀವು ಹೋಗಿ ಬನ್ನಿ ನಾವು ಬೇಡ ಎನ್ನಲ್ಲ ಎಂದಿರುವ ಸಂಗೀತ ನಿರ್ದೇಶಕ, ಪ್ಯಾನ್ ಇಂಡಿಯಾದಿಂದ ವ್ಯಾಪಾರ ಸ್ವಲ್ಪ ಜಾಸ್ತಿ ಆಗುತ್ತೆ. ದಾಡಿ ಜಾಸ್ತಿ ಬೆಳೆಯುತ್ತೆ ಅಷ್ಟೇ ಹೊರತು ಇನ್ನೇನು ಬೆಳೆಯೋದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ ಹಿಂದೆ ಓಡ್ತಿರುವ ನಾಯಕರನ್ನು ಅವರು ಎಚ್ಚರಿಸಿದ್ದಾರೆ.
ಹಂಸಲೇಖ ಅವರ ಮಾತುಗಳೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ. ಅವರು ಹೇಳಿರುವ ವಿಚಾರಗಳು ಸರಿಯಾಗಿಯೇ ಇದೆ ಎಂದು ಕೆಲವರು, ಪ್ಯಾನ್ ಇಂಡಿಯಾ ಸಿನಿಮಾಗಳಿಂದಾಗಿ ನಮ್ಮ ಸಿನಿಮಾಗಳ ವ್ಯಾಪ್ತಿ ಹಾಗೂ ಜನಪ್ರಿಯತೆ ಹೆಚ್ಚಾಗಿದೆ ಎಂದು ಕೆಲವರು ವಾದ ಮಾಡುತ್ತಿದ್ದಾರೆ.