Mollywood : 2024ರಲ್ಲಿ ಒಂದು ಕಡೆ ಕೆಲವೊಂದು ಭಾಷಾ ಸಿನಿಮಾ ರಂಗದಲ್ಲಿ ಪ್ರೇಕ್ಷಕರು ಸಿನಿಮಾಗಳ ಕಡೆಗೆ ಗಮನವನ್ನು ಕೊಡ್ತಿಲ್ಲ, ಥಿಯೇಟರ್ ಗಳ ಕಡೆಗೆ ಅವರ ಮುಖ ಮಾಡ್ತಿಲ್ಲ, ಬಿಡುಗಡೆಯಾಗೋ ಹೊಸ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಬರ್ತಿಲ್ಲ ಅನ್ನೋ ಸಮಸ್ಯೆಗಳನ್ನು ಹಂಚಿಕೊಳ್ಳುವಾಗಲೇ, ಅತ್ತ ಮಲಯಾಳಂ ಚಿತ್ರರಂಗ (Mollywood) ಮಾತ್ರ ಈ ವರ್ಷ ಬಹಳ ದೊಡ್ಡ ಮಟ್ಟದ ಯಶಸ್ಸನ್ನ ಪಡೆದುಕೊಂಡಿದ್ದು, ಇಡೀ ದೇಶದ ಗಮನವನ್ನು ಸೆಳೆದಿದೆ.
ಇಂತಹ ಒಂದು ಯಶಸ್ವಿಗೆ ಕಾರಣವಾಗಿದ್ದು ಒಂದರ ನಂತರ ಮತ್ತೊಂದು ಎನ್ನುವಂತೆ ಮಲೆಯಾಳಂನಲ್ಲಿ ಬಿಡುಗಡೆಯಾದ ಸಿನಿಮಾಗಳು ಬ್ಲಾಕ್‌ಬಸ್ಟರ್ ಸಾಲಿಗೆ ಸೇರ್ಪಡೆಯಾಗಿದ್ದೇ ಆಗಿದೆ. ಕನ್ನಡ ಚಿತ್ರರಂಗಕ್ಕೆ ಹೋಲಿಕೆ ಮಾಡಿದಾಗ ಮಲಯಾಳಂ ಸಿನಿಮಾ ರಂಗದ ವ್ಯಾಪ್ತಿ ಕನ್ನಡಕ್ಕಿಂತ ಕಡಿಮೆ ಎಂದು ಹೇಳಬಹುದಾದರೂ, ಮಲಯಾಳಂ ಸಿನಿಮಾ ಕಂಟೆಂಟ್ ಗಳಿಗೆ ಮಾತ್ರ ಬಾರಿ ಬೇಡಿಕೆ ಇದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಮಲೆಯಾಳಂ ಸಿನಿಮಾಗಳವರ ಕಂಟೆಂಟ್ ಗಳ ಕುರಿತಾಗಿ ಸಾಕಷ್ಟು ಆಸಕ್ತಿಯನ್ನು ಕೂಡಾ ತೋರಿಸುವ ಜನರಿದ್ದಾರೆ. ಅದೇ ಕಾರಣದಿಂದಲೇ ಈ ವರ್ಷ ಕೇವಲ ನಾಲ್ಕೈದು ತಿಂಗಳ ಅಲ್ಪಾವಧಿಯಲ್ಲೇ ಮಾಲಿವುಡ್ ಸಾವಿರ ಕೋಟಿ ಗಳಿಕೆಯನ್ನ ಭಾರತೀಯ ಸಿನಿಮಾರಂಗದ ಗಮನವನ್ನು ಸೆಳೆದಿದೆ. ಆದರೆ ಈಗ ಈ ಮಟ್ಟದ ಗಳಿಕೆ ಕಂಡ ಮಾಲಿವುಡ್ ಮೇಲೆ ಜಾರಿ ನಿರ್ದೇಶನಾಲಯದ (ED) ನೋಟ ಹರಿದಿದೆ.
ಜಾರಿ ನಿರ್ದೇಶನಾಲಯದ ದೃಷ್ಟಿ ಬಿದ್ದಾಯ್ತು ಎನ್ನುವ ವಿಚಾರವೀಗ ಮಾಲಿವುಡ್ ನಲ್ಲೊಂದು ತಳಮಳವನ್ನು ಸೃಷ್ಟಿಸಿದೆ. ಮಲಯಾಳಂನಲ್ಲಿ ಈ ವರ್ಷ ಸಖತ್ ಸದ್ದು ಮಾಡಿದ ಸಿನಿಮಾಗಳಲ್ಲಿ ಮಂಜುಮ್ಮೆಲ್ ಬಾಯ್ಸ್ (Manjummel Boys)ಸಹಾ ಒಂದಾಗಿದೆ. ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿರುವ ಈ ಸಿನಿಮಾ 200 ಕೋಟಿ ರೂಪಾಯಿಗಳ ಗಳಿಕೆ ಕಂಡಿದ್ದನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ಇದಾದ ನಂತರ ಮಲಯಾಳಂ ಚಿತ್ರೋದ್ಯಮ ಈಗ ಈಡಿಯ ಸುಳಿಯಲ್ಲಿ ಸಿಲುಕಿದೆ. ಇಡಿ ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಆರ್ಥಿಕ ವ್ಯವಹಾರಗಳ ಮೇಲೆ ನಿಗಾ ಇಟ್ಟಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ಗಳಿಕೆಯ ವಿಚಾರದಲ್ಲಿನ ಏರಿಳಿತಗಳು, ನಿರ್ಮಾಪಕರ ಘೋಷಣೆ ಮತ್ತು ಬ್ಯಾಂಕ್ ಲೆಕ್ಕಾಚಾರಕ್ಕೆ ತಾಳಿಯಾಗಿಲ್ಲ ಎನ್ನಲಾಗಿದೆ.
ಆದ ಕಾರಣ ಅವೆಲ್ಲವನ್ನೂ ಪರಿಶೀಲಿಸುವ ಉದ್ದೇಶದಿಂದ ನಿರ್ಮಾಪಕರು, ವಿತರಕರ ಬ್ಯಾಂಕ್ ಖಾತೆಗಳನ್ನು ಹಿಡಿದಿಟ್ಟುಕೊಳ್ಳಲು ಕಾನೂನು ಸಲಹೆಯನ್ನ ಜಾರಿ ನಿರ್ದೇಶನಲಯ ಪಡೆಯುತ್ತಿದೆ ಎಂದು ತಿಳಿದುಬಂದಿದೆ. ಕೇರಳದ ಜನಪ್ರಿಯ ಪತ್ರಿಕೆ ಮನೋರಮಾ ಮಾಡಿರುವ ವರದಿಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಮಲಯಾಳಂನಲ್ಲಿ ನಿರ್ಮಿತವಾದ ಎಲ್ಲಾ ಬ್ಲಾಕ್‌ಬಸ್ಟರ್ ಸಿನಿಮಾಗಳ ಹಣಕಾಸಿನ ದಾಖಲೆ ಪರಿಶೀಲನೆ ಮಾಡೋದಕ್ಕೆ ಇಡಿ ಈಗ ಸಿದ್ಧತೆಗಳನ್ನು ನಡೆಸುತ್ತಿದೆ.
ಸಿನಿಮಾ ನಿರ್ಮಾಣದ ಬಜೆಟ್ ಮತ್ತು ಆದಾಯದ ಅಂಕಿ ಅಂಶಗಳ ಕುರಿತಾಗಿ ಸವಿವರವಾದ ಮಾಹಿತಿಯನ್ನು ಸಂಗ್ರಹಿಸಲಿದೆ. ಕೇರಳ ಥಿಯೇಟರ್ ವಲಯದಲ್ಲಿ ಕಪ್ಪು ಹಣದ ವಹಿವಾಟು ಮನಿಲ್ಯಾಂಡ್ರಿಂಗ್ ನಡೆಯುತ್ತಿದೆ ಎಂಬುದರ ಮಾಹಿತಿಯನ್ನು ಆಧರಿಸಿ ತನಿಖೆಯನ್ನು ಆರಂಭಿಸಲಾಗಿದೆ. ಮಲಯಾಳಂನಲ್ಲಿ ಈ ವರ್ಷ ಮಂಜುಮ್ಮೆಲ್ ಬಾಯ್ಸ್, ಆಡು ಜೀವಿತಂ (Aadu jeevitam), ಪ್ರೇಮಲು, ಭ್ರಮಾಯಗಂ (Bramayugam) ನಂತಹ ಸಿನಿಮಾಗಳು ಬಿಡುಗಡೆಯಾಗಿವೆ.
ಈ ಸಿನಿಮಾಗಳು ಉತ್ತಮವಾದ ರೀತಿಯಲ್ಲಿ ಪ್ರದರ್ಶನ ಕಾಣುವುದರ ಜೊತೆಗೆ ಕಲೆಕ್ಷನ್ ವಿಚಾರದಲ್ಲೂ ದೊಡ್ಡ ಸದ್ದು ಮಾಡಿದೆ ಈ ಬ್ಲಾಕ್‌ಬಸ್ಟರ್ ಸಿನಿಮಾಗಳಿಂದಾಗಿ ಸಿನಿಮಾರಂಗದಲ್ಲಿ ನಗು ಮೂಡಿದೆ. ಆದರೆ ಈ ವೇಳೆ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿದ್ದು ಸಿನಿಮಾದ ಲಾಭಾಂಶ ಹಂಚಿಕೆ ವಿಚಾರದಲ್ಲಿ ತಂಡದವರಿಂದಲೇ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ ಅದು ಈಡಿವರೆಗೂ ತಲುಪಿದೆ.