Ayesha Khan: ಸೆಲೆಬ್ರಿಟಿಗಳು ಇರೋ ಕಡೆ ಪಾಪರಾಜಿಗಳು (paparazzi) ಹಾಜರಾಗೋದು ತೀರಾ ಸಾಮಾನ್ಯವಾದ ವಿಚಾರವಾಗಿದೆ. ದಕ್ಷಿಣ ಸಿನಿಮಾ ರಂಗದಲ್ಲಿ ಇದು ಅಷ್ಟೇನೂ ಇಲ್ಲವಾದರೂ, ಬಾಲಿವುಡ್ ನಲ್ಲಿ (Bollywood) ಮಾತ್ರ ತಾರೆಯರು ಹೋಗುವ ಸ್ಥಳಗಳ ಮಾಹಿತಿಯನ್ನು ಪಡೆದುಕೊಳ್ಳುವ ಪಾಪರಾಜಿಗಳು ಅವರಿಗಿಂತ ಮೊದಲೇ ಅಲ್ಲಿ ಹಾಜರಾಗಿ, ಸೆಲೆಬ್ರಿಟಿಗಳ ಫೋಟೋಗಳನ್ನ ಕ್ಲಿಕ್ ಮಾಡೋಕೆ ಕಾಯ್ತಾ ಇರ್ತಾರೆ. ಅದಕ್ಕೆ ಸೆಲೆಬ್ರಿಟಿಗಳ ಸುತ್ತಾ ಪಾಪರಾಜಿಗಳು ಕಾಣೋದು ತೀರಾ ಸಾಮಾನ್ಯವಾದ ವಿಚಾರವಾಗಿದೆ.
ಆದರೆ ಈಗ ಪಾಪರಾಜಿಗಳು ತಮ್ಮ ಫೋಟೋಗಳನ್ನ ತೆಗೆಯೋ ವಿಚಾರವಾಗಿ ಬಿಗ್ ಬಾಸ್ ಸ್ಪರ್ಧಿ ಆಯೇಷಾ ಖಾನ್ (Ayesha Khan) ಕೆಂಡಾಮಂಡಲವಾಗಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಶೇರ್ ಮಾಡಿ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಪಾಪರಾಜಿಗಳಿಲ್ಲದೇ ಸೆಲೆಬ್ರಿಟಿಗಳ ಫೋಟೋಗಳು ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬರೋದಿಲ್ಲ ಅನ್ನೋದು ವಾಸ್ತವ.
ಬಹಳಷ್ಟು ಸೆಲೆಬ್ರಿಟಿಗಳು ತಾವು ಹೋಗುವ ಸ್ಥಳಗಳಿಗೆ ಪಾಪರಾಜಿಗಳು ಬರೋ ಹಾಗೆ ಮಾಡೋದಕ್ಕೆ ತಮ್ಮ ಪಿಆರ್ ಟೀಮ್ ಗೆ ಸೂಚನೆಗಳನ್ನು ಕೊಟ್ಟಿರ್ತಾರೆ. ಆದರೆ ಈಗ ಆಯೆಷಾ ಖಾನ್ ಮಾತ್ರ ಪಾಪರಾಜಿಗಳ ಉದ್ದೇಶವನ್ನು ಪ್ರಶ್ನೆ ಮಾಡಿದ್ದು, ಅವರ ವಿರುದ್ಧ ತೀವ್ರವಾದ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕೆಟ್ಟ ಆ್ಯಂಗಲ್ ಗಳಿಂದ ಫೋಟೋ ತೆಗೆಯುವವರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಆಯೇಷಾ ಖಾನ್ ಹಿಂದಿ ಬಿಗ್ ಬಾಸ್ ಸೀಸನ್ ಹದಿನೇಳರಲ್ಲಿ (Bigg Boss 17) ಸ್ಪರ್ಧಿಯಾಗಿ ಭಾಗವಹಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈಗ ಪಾಪರಾಜಿಗಳ ಮೇಲೆ ಆಕ್ರೋಶಗೊಂಡಿರುವ ನಟಿಯು ಕಾರ್ ನಿಂದ ಇಳಿಯೋವಾಗ, ಡ್ರೆಸ್ ಗಳನ್ನು ಅಡ್ಜಸ್ಟ್ ಮಾಡಿಕೊಂಡ್ರೂ ಆಗಲೂ ಅಲ್ಲೇ ಅಲ್ಲಿಗೇ ಜೂಮ್ ಹಾಕೋ ಮೂಲಕ ನಿಮ್ಮ ಉದ್ದೇಶ ಎಂತದ್ದು ಅನ್ನೋದನ್ನ ತೋರಿಸಿದ್ದೀರಿ ಎಂದು ಪಾಪರಾಜಿಗಳ ಮೇಲೆ ಆಯೇಷಾ ಖಾನ್ ಕಿಡಿಕಾರಿದ್ದಾರೆ.
ಆಯೇಷಾ ತಮ್ಮ ಪೋಸ್ಟ್ ನಲ್ಲಿ, ಅದೆಲ್ಲಾ ಯಾವ ರೀತಿಯ ಆಂಗಲ್ಗಳು? ನೀವು ಏನನ್ನು ಜೂಮ್ ಮಾಡಲು ಬಯಸುತ್ತಿದ್ದೀರಿ? ನಮ್ಮ ಒಪ್ಪಿಗೆ ಕೇಳಿದ್ದೀರಾ? ಕೆಲವು ಮೀಡಿಯಾ ಹೌಸ್ ಗಳಿಗೆ ಏನಾಗಿದೆ? ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಎಲ್ಲಿಂದ ಯಾರು, ಯಾವಾಗ, ಯಾವ ಆಂಗಲ್ನಲ್ಲಿ ಚಿತ್ರ ಕ್ಲಿಕ್ ಮಾಡ್ತಾರೆ ಅನ್ನೋ ಭಯವಿಲ್ಲದೆ ಮಹಿಳೆ ತನಗೆ ಬೇಕಾಗಿರೋ ತರ ಬಟ್ಟೆ ಧರಿಸೋಕು ಸಾಧ್ಯವಿಲ್ಲವೇ? ಇದೆಲ್ಲಾ ನೋಡಿದರೆ ಸಂಪೂರ್ಣವಾಗಿ ಹೇಸಿಗೆ ಎನಿಸುತ್ತಿದೆ ಎಂದಿದ್ದಾರೆ.