Thalapathi Vijay: ಪ್ರಸ್ತುತ ದೇಶದ ಎಲ್ಲಾ ಕಡೆಗಳಲ್ಲೂ ಸಹಾ ಲೋಕಸಭಾ ಚುನಾವಣೆಯ (Lok Sabha Elections) ಕಾವು ಬಹಳ ಜೋರಾಗಿದೆ. ಹಲವು ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆದಿದ್ದು ಇದರಲ್ಲಿ ತಮಿಳುನಾಡು ಕೂಡಾ ಸೇರಿದೆ. ಈ ಬಾರಿಯ ಚುನಾವಣೆಯಲ್ಲಿ ತಮಿಳಿನ ಸ್ಟಾರ್ ನಟರೆಲ್ಲರೂ ತಮ್ಮ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಇದರಲ್ಲಿ ದಳಪತಿ ವಿಜಯ್ (Thalapathi Vijay) ಅವರು ಕೂಡಾ ಸೇರಿದ್ದಾರೆ. ಆದರೆ ವಿಜಯ್ ನಿಂದ ತಮಗೆ ತೊಂದರೆಯಾಗಿದೆ ಎನ್ನುವ ಕಾರಣಕ್ಕೆ ಸಾಮಾನ್ಯ ವ್ಯಕ್ತಿಯೊಬ್ಬರು ನಟನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ತಮಿಳು ಸಿನಿಮಾ ರಂಗದಲ್ಲಿ ಸ್ಟಾರ್ ಹೀರೋ ಆಗಿ ಗುರ್ತಿಸಿಕೊಂಡಿರೋ ನಟ ದಳಪತಿ ವಿಜಯ್ ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮದೇ ಆದ ಹೊಸ ಪಕ್ಷವನ್ನು ಕಟ್ಟಿದ್ದು, ಇದಕ್ಕೆ ‘ತಮಿಳ್ ವೆಟ್ರಿ ಕಳಗಂ’ ಎನ್ನುವ ಹೆಸರನ್ನು ನೀಡಿದ್ದಾರೆ. ಇದೇ ಶುಕ್ರವಾರ ತಮಿಳುನಾಡು (Tamilnadu) ಮತ್ತು ಪುದುಚೇರಿಯಲ್ಲಿ ಒಟ್ಟು 40 ಸಂಸದೀಯ ಸ್ಥಾನಗಳಿಗೆ ಚುನಾವಣೆ ನಡೆದಿದೆ. ದಳಪತಿ ವಿಜಯ್ ಅವರು ರಷ್ಯಾದಲ್ಲಿ ಶೂಟಿಂಗ್ ನಲ್ಲಿ ಇದ್ದವರು, ಬಿಡುವು ಮಾಡಿಕೊಂಡು ಮತದಾನ ಮಾಡುವುದಕ್ಕಾಗಿ ಚೆನ್ನೈಗೆ ಬಂದಿದ್ದರು.
ಅವರು ಸ್ಥಳೀಯ ನೀಲಂಗರಾಯಿ ಮತಗಟ್ಟೆಗೆ ಮತವನ್ನು ಚಲಾಯಿಸಲು ತಮ್ಮ ಬಳಗ ಮತ್ತು ಹಿಂಬಾಲಕರ ಜೊತೆಗೆ ಬಂದಿದ್ದಾರೆ. ವಿಜಯ್ ಅವರು ಮತದಾನವನ್ನು ಮಾಡಲು ಬಂದಾಗ ಅವರ ಜೊತೆಗೆ ಸುಮಾರು 200ಕ್ಕೂ ಹೆಚ್ಚು ಹಿಂಬಾಲಕರು ಮತ್ತು ಬೆಂಬಲಿಗರು ಸಹಾ ಏಕಕಾಲಕ್ಕೆ ಮತಗಟ್ಟೆಗೆ ಆಗಮಿಸಿದ ಕಾರಣ ಇದು ಸಾಮಾನ್ಯ ಮತದಾರರಿಗೆ ತೊಂದರೆಯನ್ನು ಉಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ಚೈನ್ನೈನ (Chennai) ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ನಟರ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬರು ಸೆಲೆಬ್ರಿಟಿ ಇಂದ ಸಮಸ್ಯೆ ಉಂಟಾಯಿತು ಎಂದು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೋಲಿಸರು ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಈಗ ತಮಿಳುನಾಡಿನ ರಾಜಕೀಯ ವಲಯದಲ್ಲಿ ಕುತೂಹಲವನ್ನು ಮೂಡಿಸಿದೆ.