Kannada serials: ಸೀರಿಯಲ್ ಗಳ ಹುಚ್ಚಾಟಕ್ಕೆ ಬೇಸತ್ತ ವೀಕ್ಷಕರು, ಹೆಚ್ತಾನೇ ಇದೆ ನೆಗೆಟಿವ್ ಕಾಮೆಂಟ್ಸ್; ಇದಕ್ಕೆ ಕಾರಣವೇನು?

Written by Soma Shekar

Published on:

---Join Our Channel---

Kannada Serials: ಪದೇ ಪದೇ ಅದೇ ಅದೇ ಎನ್ನುವಂತೆ ಆಗ್ತಾ ಇದೆಯಾ ಕನ್ನಡ ಕಿರುತೆರೆಯ ಧಾರಾವಾಹಿಗಳು (Kannada Serials). ಹೌದು, ಕಿರುತೆರೆಯ ವಿಚಾರಕ್ಕೆ ಬಂದಾಗ ಅಲ್ಲಿ ಮನರಂಜನೆಯ ಸಿಂಹಪಾಲು ಸೀರಿಯಲ್ ಗಳದ್ದು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೀರಿಯಲ್ ಗಳ ವಿರುದ್ಧ ಒಂದು ದೊಡ್ಡ ಅಸಮಾಧಾನದ ಅಲೆಯೇ ಎದ್ದಂತೆ ಕಾಣುತ್ತಿದೆ. ಸೀರಿಯಲ್ ಗಳ ಪ್ರೊಮೋ ಹೊರಗೆ ಬರುತ್ತಿದ್ದ ಹಾಗೆ ನೆಟ್ಟಿಗರಿಂದ ಅಸಮಾಧಾನ, ಅಸಹನೆ ಮತ್ತು ಬೇಸರದ ಕಾಮೆಂಟ್ ಗಳು ಹರಿದು ಬರುವುದು ಸಾಮಾನ್ಯವಾಗಿದೆ.

ಎಲ್ಲಾ ಕಥೆಗಳು (Stories) ಒಂದೇ ಆದರೆ ಪಾತ್ರಗಳ (Characters) ಹೆಸರು ಮತ್ತು ಸನ್ನಿವೇಶ ಬದಲಾಗಿದೆ ಅಷ್ಟೇ ಎನ್ನುವಂತಹ ಭಾವನೆ ಈಗಾಗಲೇ ಕಿರುತೆರೆಯ ಪ್ರೇಕ್ಷಕರಲ್ಲಿ ಮೂಡಿದೆ. ಇತ್ತೀಚಿನ ಸೀರಿಯಲ್ ಗಳಲ್ಲಿ ಕಥೆ ಎನ್ನುವುದು ಒಂದಕ್ಮೊಂದು ಲಿಂಕ್ ಆಗಿರುವ ಹಾಗೆ ಇದೆ. ಬಹುತೇಕ ಕಥೆಗಳಲ್ಲಿ ಚಿಕ್ಕಮ್ಮನವರು, ದೊಡ್ಡಮ್ಮನವರು, ಅತ್ತೆಗಳು ವಿಲನ್ ಗಳಾಗಿದ್ದಾರೆ. ಅವರು ನಾಯಕನ ಮುಂದೆ ಒಳ್ಳೆಯವರು ಉಳಿದಂತೆ ಖಳನಾಯಕಿಯರು.

ಮನೆಯಲ್ಲಿ ಎಲ್ಲರ ಮುಂದೆ ಒಳ್ಳೆಯವರಂತೆ ನಟಿಸುವ ಚಿಕ್ಕಮ್ಮಂದಿರು, ದೊಡ್ಡಮ್ಮಂದಿರು ಆಸ್ತಿಗಾಗಿ ನಾಯಕನನ್ನು ಮೊದಲಿನಿಂದ ಕೊನೆಯವರೆಗೂ ಅಂದರೆ ವರ್ಷಗಳ ಗಟ್ಟಲೆ ಮೋಸ ಮಾಡಿಕೊಂಡು ಕುತಂತ್ರಗಳನ್ನು ಮಾಡಿಕೊಂಡೇ ಇರ್ತಾರೆ. ನಾಯಕಿಯ ವಿರುದ್ಧ ತಂತ್ರಗಳನ್ನು ಹೂಡುತ್ತಲೇ ಇರುತ್ತಾರೆ. ಎಲ್ಲಾ ಸೀರಿಯಲ್ ಗಳಲ್ಲೂ ಖಳನಾಯಕಿರ ಪಾತ್ರ ಒಂದೇ ತರ ಇದೆ ಅನ್ನೋದು ನಿಜ.

ಇನ್ನು ನಾಯಕ ನಾಯಕಿ ಆರಂಭದಲ್ಲಿ ಒಬ್ಬರನ್ನು ಒಬ್ಬರು ದ್ವೇಷಿಸುತ್ತಾ,ಜಗಳ ಆಡ್ಕೊಂಡು ಇರ್ತಾರೆ. ಆಮೇಲೆ ಅವರ ಮಧ್ಯೆ ಪ್ರೀತಿ ಮೂಡುತ್ತೆ. ಮನೆಯವರನ್ನು ಎದುರಿಸಿ ಮದುವೆ ಆಗ್ತಾರೆ. ಮದುವೆ ಆದ ಮೇಲೆ ಒಂದಷ್ಟು ಸಮಸ್ಯೆ ಎದುರಿಸೋದು ಸಾಮಾನ್ಯ ಆಗಿದೆ. ಇನ್ನು ಪ್ರೇಕ್ಷಕರಿಗೆ ಬುದ್ಧಿಯೇ ಇಲ್ಲ ಗಮನಿಸೋದೇ ಇಲ್ಲ ಎನ್ನುವಂತೆ ತರ್ಕಕ್ಕೆ ದೂರವಾದ ನೂರು ಸನ್ನಿವೇಶಗಳನ್ನು ತೋರಿಸೋದು ಕಾಣುತ್ತದೆ.‌

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಇಂತಹ ಅಸಮಂಜಸ ದೃಶ್ಯಗಳನ್ನು ನೋಡಿ ರೋಸಿ ಹೋಗಿದ್ದಾರೆ. ಅದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಟ್ಟ ಕೋಪವನ್ನು ಹೊರ ಹಾಕುತ್ತಿದ್ದಾರೆ. ಭಾಗ್ಯ ಲಕ್ಷ್ಮಿ ಸೀರಿಯಲ್ ನಲ್ಲಿ ಮಗಳ ಜೊತೆ ಒಂದು ಪ್ರತಿಷ್ಠಿತ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹತ್ತನೇ ತರಗತಿ ಓದಿ ಫಸ್ಟ್ ಕ್ಲಾಸ್ ಗಳಿಸುವ ಭಾಗ್ಯ ಇಂಟರ್ವ್ಯೂ ನಲ್ಲಿ ಇಂಗ್ಲಿಷ್ ಬರೋದೆ ಇಲ್ಲ ಅನ್ನೋ ಪೆದ್ದಿಯ ತರ ಆಡೋದು, ವಿಲನ್ ಗಳು ಕೊಲೆ ಮೇಲೆ ಕೊಲೆ ಮಾಡಿದ್ರು ಅವರನ್ನ ಕ್ಷಮಿಸಿ ಇನ್ನಷ್ಟು ತಪ್ಪು ಮಾಡೋ ಅವಕಾಶ ಕೊಡೋದು ಎಲ್ಲಾ ವಿಚಿತ್ರ ಎನಿಸುತ್ತದೆ.

ಸೀತಾರಾಮ (SeethaRama) ಸೀರಿಯಲ್ ವಿಚಾರದಲ್ಲಿ ಸೀತಾಗೆ ಸಿಹಿ ಸ್ವಂತ ಮಗಳಾ? ಹಾಗಾದರೆ ಅವಳ ಗಂಡ ಯಾರು? ಅವಳಿಗೆ ವಿಚ್ಚೇದನ ಆಗಿದೆಯೋ ಇಲ್ವೋ? ವಿಚ್ಚೇದನ ಪಡೆಯದೇ ಈಗ ರಾಮ್ ಜೊತೆ ಮದುವೆ ಆಗ್ತಾ ಇದ್ದಾಳಾ?? ಈ ಪ್ರಶ್ನೆಗಳಿಗೆ ಖಂಡಿತ ಉತ್ತರ ಅನ್ನೋದೇ ಇನ್ನೂ ಸಿಕ್ಕಿಲ್ಲ. ಅಮೃತ ಧಾರೆಯಲ್ಲಿ (Amruthadhaare) ಗೌತಮ್ ದೀವಾನ್ ಪ್ರೇಮ ನಿವೇದನೆ ಮಾಡೋ ಸಮಯಕ್ಕೆ ಭೂಮಿಕಾ ಕಿಡ್ನಾಪ್ ಆಗಿದ್ದಾಗಿದೆ. ಅಲ್ಲಿಗೆ ಪ್ರೇಮ ನಿವೇದನೆ ಮುಂದಕ್ಕೆ ಹೋಯ್ತು ಅಂತಾಗಿದೆ.‌

ಅಮೃತಧಾರೆಯಲ್ಲಿ ಚಿಕ್ಕಮ್ಮ, ಸೀತಾರಾಮ ದಲ್ಲಿ ಚಿಕ್ಕಿ, ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಚಿಕ್ಕಮ್ಮ, ಪುಟ್ಟಕ್ಕನ ಮಕ್ಕಳಲ್ಲಿ ಚಿಕ್ಕಮ್ಮ, ಶ್ರಾವಣಿ ಸುಬ್ರಹ್ಮಣ್ಯ ದಲ್ಲಿ ಅತ್ತೆ, ಅವನು ಮತ್ತು ಶ್ರಾವಣಿಯಲ್ಲಿ ದೊಡ್ಡಮ್ಮ, ಸತ್ಯದಲ್ಲಿ ನಾಯಕನ ಅಕ್ಕ, ಟಂತರಪಟದಲ್ಲಿ ನಾಯಕನ ಅಕ್ಕ ಹೀಗೆ ಬಹುತೇಕ ಎಲ್ಲಾ ಸೀರಿಯಲ್ ಗಳಲ್ಲಿ ವಿಲನ್ ಲೇಡೀಸ್ ಪಾತ್ರ ಅಚ್ಚೊತ್ತಿದಂತೆ ಒಂದೇ ರೀತಿ ವರ್ತಿಸುತ್ತವೆ.

ಒಟ್ನಲ್ಲಿ ಕಿರುತೆರೆಯ ಸೀರಿಯಲ್ ಗಳು ಭರ್ಜರಿ ಟ್ರೋಲ್ ಸಹಾ ಆಗ್ತಿವೆ. ಒಳ್ಳೆಯ ಕಂಟೆಂಟ್ ಇರುವ ಭೂಮಿಗೆ ಬಂದ ಭಗವಂತ ನಂತಹ ಸೀರಿಯಲ್ ಗಳನ್ನು ನೋಡುವ ಪ್ರೇಕ್ಷಕರ ವರ್ಗ ಕಡಿಮೆಯಾಗಿದೆ. ಟಿ ಆರ್ ಪಿ ವಿಚಾರಕ್ಕೆ ಬಂದಾಗ ಅಲ್ಲಿ ಯಾವೆಲ್ಲಾ ಸೀರಿಯಲ್ ಗಳ ಬಗ್ಗೆ ಅಸಮಾಧಾನ ಹೊರಹಾಕಲಾಗುತ್ತೋ ಅದೇ ಸೀರಿಯಲ್ ಗಳು ಟಾಪ್ ನಲ್ಲಿ ಕಾಣುತ್ತೆ ಅನ್ನೋದು ಸಹಾ ನಿಜ.

Leave a Comment