Sai Dharam Tej: ಸೋಶಿಯಲ್ ಮೀಡಿಯಾ (Social Media) ಅನ್ನೋದು ಇಂದು ಎಷ್ಟು ಪ್ರಭಾವಶಾಲಿಯಾಗಿದೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಅದೇ ವೇಳೆ ಸೋಶಿಯಲ್ ಮೀಡಿಯಾವನ್ನು ಮನಸೋ ಇಚ್ಛೆ ಬಳಸಿಕೊಳ್ಳುವವರು ಸಹಾ ಹೆಚ್ಚಾಗ್ತಿದ್ದಾರೆ. ಕೆಟ್ಟ ಕೆಟ್ಟ ಪೋಸ್ಟ್ ಗಳನ್ನು ಮಾಡುವುದು, ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕಾಮೆಂಟ್ ಗಳನ್ನು ಮಾಡೋದು, ಸೆಲೆಬ್ರಿಟಿಗಳ ಫೋಟೋ, ವೀಡಿಯೋಗಳನ್ನು ಟ್ರೋಲ್ ಮಾಡೋದು, ಕೆಟ್ಟದಾಗಿ ಮೀಮ್ಸ್ ಮಾಡೋದು ತೀರಾ ಸಾಮಾನ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿ ಆಗಿದ್ದು ಡೀಪ್ ಫೇಕ್ ವೀಡಿಯೋಗಳ (Deep Fake Videos) ಮೂಲಕವೂ ಸೆಲೆಬ್ರಿಟಿಗಳು ಮಾತ್ರವೇ ಅಲ್ಲದೇ ಬೇರೆಯವರ ನಕಲಿ ವೀಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರಿಗೆ ಮನಸ್ಸಿಗೆ ಬಂದ ಹಾಗೆ ವರ್ತಿಸೋದಕ್ಕೆ ಯಾವುದೇ ನಿಯಂತ್ರಣ ಇಲ್ಲ ಎನ್ನುವಂತಾಗಿದೆ.
ಈಗ ಇದೇ ವಿಚಾರವಾಗಿ ತೆಲುಗಿನ ಯುವ ಸ್ಟಾರ್ ನಟನಾಗಿರುವ ಸಾಯಿ ಧರಮ್ ತೇಜ್ (Sai Dharam Tej) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೊಂದು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದು, ಬಹಳಷ್ಟು ಜನ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಅದರಲ್ಲೂ ವಿಶೇಷವಾಗಿ ತಂದೆ ತಾಯಿಗಳಿಗೆ ಕಿವಿ ಮಾತನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ಹಾಗಾದರೆ ನಟನ ಪೋಸ್ಟ್ ನಲ್ಲಿ ಏನಿದೆ ಎನ್ನುವುದಾದರೆ, ಸಾಮಾಜಿಕ ಮಾಧ್ಯಮದ ಪ್ರಪಂಚವು ನಿರ್ದಯಿ ಮತ್ತು ಬಹಳ ಅಪಾಯಕಾರಿಯಾಗಿದೆ. ಇದನ್ನು ನಿಯಂತ್ರಿಸುವುದು ತುಂಬಾ ಕಷ್ಟವಾಗಿದೆ. ನಿಮ್ಮ ಮಕ್ಕಳ ವೀಡಿಯೋ ಅಥವಾ ಫೋಟೋಗಳನ್ನು ಪೋಸ್ಟ್ ಮಾಡುವಾಗ ದಯವಿಟ್ಟು ನಿಮ್ಮ ವಿವೇಚನೆಯನ್ನು ಬಳಸಿ.
ನಿಮ್ಮ ಮಕ್ಕಳ ಫೋಟೋಗಳು ಅಥವಾ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೊದಲು ಜಾಗರೂಕರಾಗಿರಿ ಮತ್ತು ಸರಿಯಾದ ಕಾಳಜಿ ವಹಿಸಿ. ಏಕೆಂದರೆ ಗುಣಮಟ್ಟ ಕುಸಿದಿರುವ, ಕೆಟ್ಟ ಜನರಿಗೆ ಜನರಿಗೆ ಪೋಷಕರ ನೋವು ಎಂದೂ ಕಾಣುವುದಿಲ್ಲ ಅದಕ್ಕೆ ಎಚ್ಚರದಿಂದ ಇರಿ ಎಂದು ನಟ ತಿಳಿಸಿದ್ದಾರೆ.
ಸಾಯಿ ಧರಮ್ ತೇಜ್ ಅವರ ಇಂತಹುದೊಂದು ಸಾಮಾಜಿಕ ಕಳಕಳಿಯ ಪೋಸ್ಟ್ ನೆಟ್ಟಿಗರ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ಅನೇಕರು ನಟನಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಇದೇ ವೇಳೆ ಇನ್ನೂ ಕೆಲವರು ಏನಾಯಿತು? ಯಾಕೆ ಹೀಗೆ ಪೋಸ್ಟ್ ಹಾಕಿರುವಿರಿ ಎಂದೂ ಕಾಮೆಂಟ್ ಗಳನ್ನ ಮಾಡಿದ್ದಾರೆ.