Yuva Rajkumar Divorce: ಹೆದರಲಾರೆ, ಮತ್ತೆ ಬರುವೆ ಎಂದು ಅಮೆರಿಕಾಕ್ಕೆ ಹೊರಟ ಯುವರಾಜ್ ಕುಮಾರ್ ಪತ್ನಿ

Written by Soma Shekar

Published on:

---Join Our Channel---

Yuva Rajkumar Divorce: ಇಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸ್ಯಾಂಡಲ್ವುಡ್ ನಟ, ದೊಡ್ಮನೆ ಕುಡಿ ಯುವರಾಜ್ ಕುಮಾರ್ (Yuva Rajkumar Divorce) ಮತ್ತು ಪತ್ನಿ ಶ್ರೀದೇವಿ ಬೈರಪ್ಪ ಅವರ ವಿಚ್ಚೇದನದ ಅರ್ಜಿ ವಿಚಾರಣೆಗೆ ಬರಲಿದೆ. ವಿಚಾರಣೆಯ ಹಿನ್ನೆಲೆಯಲ್ಲಿ ಶ್ರೀದೇವಿ ಅವರು ವಿದೇಶದಿಂದ ಬೆಂಗಳೂರಿಗೆ ವಾಪಸ್ಸು ಬಂದಿದ್ದರು. ಆದರೆ ಈಗ ಅವರು ಮತ್ತೆ ಅಮೆರಿಕಾಕ್ಕೆ ತೆರಳಿದ್ದಾರೆ. ಈ ವೇಳೆ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಒಂದು ಸುದೀರ್ಘವಾದ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.

ಶ್ರೀದೇವಿ ಬೈರಪ್ಪ (Sridevi Byrappa) ಅವರ ಪೋಸ್ಟ್ ನಲ್ಲಿ ಏನಿದೆ ಎನ್ನುವುದಾದರೆ, ಕಳೆದ 15 ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದಾಗ, ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘನತೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ನಡೆ ತೋರಿದ ಮಾಧ್ಯಮದ ಪ್ರತಿಯೊಬ್ಬರಿಗೂ ನಾನು ಪ್ರಾಮಾಣಿಕವಾಗಿ ನನ್ನ ಹೃದಾಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ.

ಕಳೆದ ದಶಕಗಳಿಂದ ನನ್ನ ಜೊತೆಯಾಗಿದ್ದ ನನ್ನ ಸ್ನೇಹಿತರ ಬಳಗ, ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ತೀರ ದುರದೃಷ್ಟಕರ. ಆದರೂ ಸಹ, ನಿಮ್ಮ ತಾಳ್ಮೆಗೆ, ಸತ್ಯದ ಪರ ಧೃತಿಗೆಡದೆ ನಿಲ್ಲುವ ನಿಮ್ಮ ಹಾಗೂ ನಿಮ್ಮ ಕುಟುಂಬದ ಸ್ಥೆರ್ಯಕ್ಕೆ, ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಈ ವಿಚಾರದಲ್ಲಿ ನಿಮಗಾದ ನೋವಿಗೆ ನಾನು ವಿನಮ್ರತೆಯಿಂದ ಕ್ಷಮೆಯಾಚಿಸುತ್ತೇನೆ.

ಎಲ್ಲರಿಗೂ ನಿಮ್ಮಂಥ ಸಹೃದಯಿ ಸ್ನೇಹ ಬಳಗ ಸಿಗುವ ಅದೃಷ್ಟ ಸಿಗಲಿ ಎಂದು ಹಾರೈಸುತ್ತೇನೆ. ಕಳೆದ ಏಳು ತಿಂಗಳುಗಳು ತೀವ್ರ ಒತ್ತಡ ಮತ್ತು ಆಘಾತದಿಂದ ಕೂಡಿದ್ದವು. ನನ್ನೊಂದಿಗೆ ಶಕ್ತಿಯಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಚಲನಚಿತ್ರರಂಗದ ಬಂಧುಗಳು, ಅನ್ಯಾಯದ ವಿರುದ್ಧ ದನಿಯೆತ್ತಿ ನನ್ನ ಪರ ನಿಂತ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನೊಂದಿಗೆ ದುಃಖಿಸಿ ಸಾಂತ್ವಾನ ಹೇಳಿದ ನನ್ನ ವಿದ್ಯಾರ್ಥಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನನ್ನ ಶಕ್ತಿಯನ್ನು ಮರಳಿ ಪಡೆಯಲು ಮತ್ತು ನ್ಯಾಯದ ಪರ ಹೋರಾಡಲು ನೀವೆಲ್ಲರೂ ನನಗೆ ಸಹಾಯ ಮಾಡಿದ್ದೀರಿ. ನಿಮ್ಮ ಪ್ರೀತಿ, ದಯೆಯ ಋಣ ತೀರಿಸುವ ಅವಕಾಶ ನನಗೆ ಸಿಗಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ ಎಂದು ನಾನು ಪುನರುಚ್ಚರಿಸುತ್ತೇನೆ.

ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ. ಹಾರ್ವರ್ಡ್ ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನು ಶುರುಮಾಡಿದ್ದು, ಆ ಕಾಯಕವನ್ನು ಮುಂದುವರಿಸಲು ನಾನು ಅಮೆರಿಕಾಗೆ ಹಿಂತಿರುಗುತ್ತಿದ್ದೇನೆ.

ಈ ಸಮಯವು, ನನಗೆ ಇನ್ನಷ್ಟು ಕಲಿಯಲು, ಬೆಳೆಯಲು ಮತ್ತು ಎಲ್ಲಾ ಆಘಾತಗಳಿಂದ ಗುಣಮುಖಳಾಗಲು ಸಹಾಯ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ ಮತ್ತು ಇಲ್ಲಿನ ಕೆಲಸಗಳನ್ನು ಮುಂದುವರಿಸುತ್ತೇನೆ. ದೇವರ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ ಎಂದು ಬರೆದಿದ್ದಾರೆ.

Leave a Comment