Aparna Vastare: ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ (Aparna Vastare) ಅಂದ್ರೆ ಕನ್ನಡ. ಆಕೆಯ ಸಾವನ್ನು ನಂಬಲಾಗುತ್ತಿಲ್ಲ. ಒಂಥರಾ ಗರ ಬಡಿದಂಗಾಗಿದೆ ಎಂದು ಅಪರ್ಣಾ ಸಾವಿನ ಸುದ್ದಿ ಕೇಳಿದ ಜನಪ್ರಿಯ ನಟ ಮಂಡ್ಯ ರಮೇಶ್ (Mandya Ramesh) ಭಾವುಕರಾಗಿದ್ದಾರೆ. ಅಪರ್ಣಾ ಅವರ ಅನಿರೀಕ್ಷಿತ ಸಾವು ಕನ್ನಡಿಗರಿಗೆ ದೊಡ್ಡ ಶಾಕ್ ನೀಡಿದೆ ಎನ್ನುವುದು ಸಹಾ ವಾಸ್ತವದ ವಿಚಾರವಾಗಿದ್ದು, ಈ ವೇಳೆ ಮಂಡ್ಯ ರಮೇಶ್ ಅವರು ಒಂದಷ್ಟು ಅರ್ಥ ಪೂರ್ಣ ವಿಚಾರಗಳನ್ನು ಮಾತನಾಡಿದ್ದಾರೆ.
ಮಂಡ್ಯ ರಮೇಶ್ ಅವರು ಮಾತನಾಡುತ್ತಾ, ಆಕೆಯ ಕನ್ನಡ ನಮಗೆ ತುಂಬಾ ಖುಷಿಯನ್ನು ಕೊಟ್ಟಿದೆ. ಅಪರ್ಣಾಳ ಮನುಷ್ಯತ್ವ ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದೆ. ಅಂತಹ ಅಪರ್ಣಾಗೆ ಇಷ್ಟೊಂದು ಭೀಕರವಾಗಿ ಸಾವು ಬಂದಿದ್ದು ಆಘಾತವಾಗಿದೆ ಎಂದಿದ್ದಾರೆ. ಕನ್ನಡನಾಡು ಇಂದು ಶುದ್ಧ ಕನ್ನಡತಿಯನ್ನ ಕಳೆದುಕೊಂಡಿದೆ. ನಿರೂಪಣೆ ಹೇಗೆ ಮಾಡಬೇಕು ಎಂಬುದಕ್ಕೆ ಅಪರ್ಣಾ ಉತ್ತಮ ನಿದರ್ಶನದಂತಿದ್ದಳು.
ಆಕೆಯ ಶುದ್ಧ ಕನ್ನಡ ಉಚ್ಚಾರಣೆ ಆಹಾ, ಚೆಂದವಾಗಿ ಮಾತನಾಡಬಲ್ಲ ಅಪರ್ಣಾ ನಿಜವಾಗಿಯೂ ನಿರೂಪಣೆ ಶಾಲೆ ತೆರೆಯಬೇಕಿತ್ತು. ನಾನು ಅಪರ್ಣಾಳಿಗೆ ಇದನ್ನೇ ಹೇಳಿದ್ದೆ. ಆದರೆ ಇಂದು ಕನ್ನಡದ ದೊಡ್ಡ ಶಕ್ತಿ ಕಣ್ಮರೆಯಾಗಿದೆ ಎಂದು ಮಂಡ್ಯ ರಮೇಶ್ ಅವರು ಕಣ್ಣೀರು ಹಾಕಿದ್ದಾರೆ. ಅಪರ್ಣಾ ಭಾಷೆಯ ಮಹತ್ವವನ್ನು ಬಹಳ ಸೂಕ್ಷ್ಮವಾಗಿ ಬೇರೆಯವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದರು.
ಶುದ್ಧ ಕನ್ನಡವನ್ನು ಜನರು ಎಲ್ಲಿಯವರೆಗೆ ಪ್ರೀತಿಸ್ತಾರೋ ಅಲ್ಲಿಯವರೆಗೂ ಅಪರ್ಣಾ ನೆನಪಿನಲ್ಲಿ ಇರ್ತಾರೆ. ಆಕೆ ಮಜಾ ಟಾಕೀಸ್ನಲ್ಲಿ ತುಂಬಾ ತಮಾಷೆ ಮಾಡ್ತಿದ್ರು. ಆದರೆ ಅಪರ್ಣಾ ದೊಡ್ಡ ಸಂಸ್ಕಾರವಂತರಾಗಿದ್ದರು. ಮಾತೃತ್ವದ ಹೆಣ್ಣು ಅವರಾಗಿದ್ದರು. ನಾವು ಆಸ್ಟ್ರೇಲಿಯಾಗೆ ಹೋಗಿದ್ದ ಸಂದರ್ಭ ಯಾವಾಗಲೂ ತುಂಬಾ ಕಾಡುತ್ತೆ. ತಮಾಷೆಯನ್ನೂ ಸಹಾ ಶುದ್ಧ ಕನ್ನಡದಲ್ಲೇ ಮಾಡ್ತಿದ್ರು. ಅವರ ತಂದೆ ದೊಡ್ಡ ಪತ್ರಕರ್ತರು.
ಅಪ್ಪನ ಹೆಸರು, ಮಾತಿನ ಧಾಟಿ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡ ಮಗಳು ಆಕೆ. ಅಪರ್ಣಾರ ಧ್ವನಿಯೇ ವಿಶೇಷವಾಗಿದೆ. ಆಕೆಯ ಸಂದರ್ಶನ, ಆಕೆ ನಡೆಸಿಕೊಟ್ಟ ಕಾರ್ಯಕ್ರಮಗಳು ಅದ್ಭುತ, ಮತ್ತೆ ಮತ್ತೆ ಕೆಳಬೇಕೆನಿಸುತ್ತೆ ಆ ಧ್ವನಿ ಎಂಬುದಾಗಿ ಮಂಡ್ಯ ರಮೇಶ್ ಅವರು ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.