Chiranjeevi: ಕೇರಳದ ವಯನಾಡಿನಲ್ಲಿ (waynadu) ಸಂಭವಿಸಿದ ಭೂಕುಸಿತದ ಪರಿಣಾಮ ನೂರಾರು ಜನರು ಕಂಗಾಲಾಗಿದ್ದಾರೆ. ಜುಲೈ 30ರಂದು ಸಂಭವಿಸಿದ ಭೂಕುಸಿತದಿಂದಾಗಿ 300ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿರುವುದು ವರದಿ ಆಗಿದ್ದು, ಸುಮಾರು 200ಕ್ಕೂ ಹೆಚ್ಚು ಜನರು ನಾಪತ್ತೆ ಆಗಿದ್ದಾರೆ. ಅವರ ಹುಡುಕಾಟ ಕಾರ್ಯ ಸಹಾ ನಡೆಯುತ್ತಿದೆ. ಒಂದಿಡೀ ಊರು ಸ್ಮಶಾನವಾಗಿ ಬದಲಾಗಿದೆ.
ಇಂತಹ ದುರಂತದ ಸಮಯದಲ್ಲಿ ಭೂಕುಸಿತದ ಸಂತ್ರಸ್ತರಿಗೆ ನೆರವಿನ ಅನಿವಾರ್ಯತೆ ಇದೆ. ಈಗಾಗಲೇ ಒಂದಷ್ಟು ಜನ ಸ್ಟಾರ್ ನಟರು ತಮ್ಮ ಸಾಮರ್ಥ್ಯಾನುಸಾರ ಪರಿಹಾರ ನಿಧಿಗೆ ದೇಣಿಗೆಯನ್ನು ನೀಡಿದ್ದಾರೆ. ಈಗ ‘ಮೆಗಾ ಸ್ಟಾರ್’ ಚಿರಂಜೀವಿ (Chiranjeevi), ರಾಮ್ ಚರಣ್ (Ram Charan) ಅವರು ಜೊತೆಯಾಗಿ 1 ಕೋಟಿ ರೂಪಾಯಿ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಚಿರಂಜೀವಿ ಅವರು ಈ ವಿಚಾರವಾಗಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಟ ತಮ್ಮ ಪೋಸ್ಟ್ ನಲ್ಲಿ, ‘ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಪಕೃತಿಯ ವಿಕೋಪಕ್ಕೆ ನೂರಾರು ಜನರು ಪ್ರಾಣ ಕಳೆದಕೊಂಡಿದ್ದಕ್ಕೆ ತೀವ್ರ ನೋವುಂಟಾಗಿದೆ. ವಯನಾಡು ದುರಂತದ ಸಂತ್ರಸ್ತರಿಗಾಗಿ ನನ್ನ ಮನ ಮಿಡಿಯುತ್ತಿದೆ.
ಚರಣ್ ಮತ್ತು ನಾನು ಜೊತೆಯಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರ ಬೆಂಬಲಕ್ಕೆ ನಿಲ್ಲುತ್ತಿದ್ದೇವೆ. ನೋವಿನಲ್ಲಿ ಇರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಮೆಗಾ ಸ್ಟಾರ್ ಚಿರಂಜೀವಿ ಅವರು ಬರೆದುಕೊಂಡಿದ್ದಾರೆ.