Actor Chethan: ನಟ ಹಾಗೂ ಸಾಮಾಜಿಕ ಹೋರಾಟಗಾರನಾಗಿ ಗುರ್ತಿಸಿಕೊಂಡಿರುವ ಚೇತನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಚೇತನ್ (Actor Chethan) ಅವರು ಪ್ರಸ್ತುತ ವಿಚಾರಗಳು, ರಾಜಕೀಯ ಬೆಳವಣಿಗೆಗಳು ಹಾಗೂ ಇನ್ನಿತರೆ ವಿಚಾರಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಈಗ ಅವರು ಸಿನಿಮಾವೊಂದರ ಬಿಡುಗಡೆ ಮೇಲೆ ಕರ್ನಾಟಕ ಸರ್ಕಾರ ಹೇರಿರುವ ನಿರ್ಬಂಧದ ಬಗ್ಗೆ ತಮ್ಮ ಅನಿಸಿಕೆ ಶೇರ್ ಮಾಡಿಕೊಂಡಿದ್ದಾರೆ.
ಹೌದು, ಬಾಲಿವುಡ್ ನ ಸಿನಿಮಾ ಹಮಾರೆ ಬಾರಹ್ ನ (Hamare Barah) ಬಿಡುಗಡೆಯನ್ನು ಎರಡು ವಾರಗಳ ಕಾಲ ಕರ್ನಾಟಕ ಸರ್ಕಾರ ನಿಷೇಧ ಮಾಡಿದೆ. ಇದರಲ್ಲಿ ಇಸ್ಲಾಂ ಕುರಿತಾಗಿ ಮತ್ತು ಮುಸ್ಲಿಂ ಮಹಿಳೆಯರ ಕುರಿತಾಗಿ ಅವಹೇಳನಕಾರಿಯಾಗಿ ತೋರಿಸಲಾಗಿದೆ ಎನ್ನುವ ಕಾರಣಕ್ಕೆ ಸಿನಿಮಾ ಬಿಡುಗಡೆ ಮಾಡಿದರೆ ಕೋಮು ಗಲಭೆ ಆಗಬಹುದು ಎಂದು ನಿರ್ಬಂಧ ಹೇರಿದೆ ಎಂದು ತಿಳಿಸಿದೆ.
ಈ ವಿಚಾರವಾಗಿ ನಟ ಚೇತನ್ ಅವರು ತಮ್ಮ ಪೋಸ್ಟ್ ನಲ್ಲಿ, ಮುಸ್ಲಿಂ ಗುಂಪುಗಳು ಮತ್ತು ಇತರರು ಚಿತ್ರ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ‘ಹಮಾರೇ ಬಾರಾಹ್’ ಚಿತ್ರವನ್ನು ನಿಷೇಧಿಸಿದೆ. ಇದು 19ನೇ ವಿಧಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಿದ್ದರಾಮಯ್ಯ (Siddharamaiah) ಸರ್ಕಾರದ ನೇರ ದಾಳಿಯಾಗಿದೆ. ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದಲ್ಲಿದ್ದಾಗ ಇತರರ ಮೇಲೆ ಬೆರಳು ತೋರಿಸಲು ಇಷ್ಟಪಡುತ್ತದೆ ಆದರೆ ಅದು ಅಧಿಕಾರದಲ್ಲಿದ್ದಾಗ ಅಸಂವಿಧಾನಿಕವಾಗಿ ವರ್ತಿಸುತ್ತದೆ.
ಈ ಚಿತ್ರದ ಸಂದೇಶವನ್ನು ಇಷ್ಟಪಡದವರಿಗೆ ತಮ್ಮದೇ ಆದ ಚಲನಚಿತ್ರವನ್ನು ಮಾಡುವ ಸಂಪೂರ್ಣ ಹಕ್ಕಿದೆ! ಎಂದು ಬರೆದುಕೊಂಡಿದ್ದಾರೆ. ನಟ ಚೇತನ್ ಅವರು ಹಲವು ವಿಚಾರಗಳಲ್ಲಿ ತಾನು ಯಾವುದೇ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ಮಾತನಾಡದೇ ತಮ್ಮ ನಿಲುವನ್ನು ಮಾತ್ರವೇ ಹಂಚಿಕೊಳ್ಳುತ್ತಾರೆ. ಈಗಲೂ ಸಿನಿಮಾ ಬಿಡುಗಡೆ ಮೇಲಿನ ನಿರ್ಬಂಧದ ಬಗ್ಗೆ ಚೇತನ್ ಅವರು ತಮ್ಮ ಅಸಮಾಧಾನ ಹಂಚಿಕೊಂಡಿದ್ದಾರೆ.