Paris Olympics 2024 : ಪ್ಯಾರಿಸ್ ಒಲಂಪಿಕ್ಸ್ 2024 ರಲ್ಲಿ (Paris Olympics 2024) ಭಾರತದ ಕ್ರೀಡಾಪಟುಗಳ ಆರು ಪದಕಗಳನ್ನು ಗೆದ್ದು ಬಂದಿದ್ದಾರೆ. ಕಳೆದ ಬಾರಿ ಅಂದರೆ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕವನ್ನು ಗೆದ್ದಿತ್ತು. ಆದರೆ ಈ ಬಾರಿ ಬಂಗಾರದ ಕನಸು ನನಸಾಗದೇ ಇದ್ದರೂ ಕೂಡಾ ರಜತ ಪದಕವು ದಕ್ಕಿದೆ. ಭಾರತದ ಕ್ರೀಡಾಪಟುಗಳು ಸಾಧನೆಗೆ ದೇಶವಾಸಿಗಳು ತಮ್ಮ ಮೆಚ್ಚುಗೆಗಳನ್ನು ಸಹಾ ನೀಡಿದ್ದಾರೆ.
ಭಾರತ ಪರ ಶೂಟರ್ ಮನು ಭಾಕರ್ ಎರಡು ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ (ಸರಬ್ಜೋತ್ ಸಿಂಗ್ ಜೊತೆಗೆ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್), ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ, ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರ ಉತ್ತಮ ಪ್ರದರ್ಶನದಿಂದಾಗಿ ಭಾರತೀಯ ಪುರುಷರ ಹಾಕಿ ತಂಡವು ಸತತ ಎರಡನೇ ಬಾರಿಗೆ ಕಂಚಿನ ಪದಕವನ್ನು ಗೆದ್ದಿದೆ.
ಹೀಗೆ ಒಲಂಪಿಕ್ಸ್ ನಲ್ಲಿ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ ಕ್ರೀಡಾಪಟುಗಳಿಗೆ ಆಯಾ ರಾಜ್ಯಗಳು ಮತ್ತು ಕ್ರೀಡಾ ಇಲಾಖೆಯಿಂದ ಸಾಕಷ್ಟು ಬಹುಮಾನಗಳು ಸಿಕ್ಕಿವೆ. ಹಾಗಾದರೆ ಅವರಿಗೆ ಸಿಕ್ಕ ಬಹುಮಾನಗಳು ಯಾವುವು? ಎಂದು ತಿಳಿಯುವ ಆಸಕ್ತಿ ನಿಮ್ಮದಾದರೆ ಅದಕ್ಕೆ ಇಲ್ಲಿದೆ ಉತ್ತರ.
ಮನು ಭಾಕರ್ (Manu Bhaker) : ಒಲಂಪಿಕ್ಸ್ ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಹೆಗ್ಗಳಿಕೆ ಮತ್ತು ಗೌರವಕ್ಕೆ ಪಾತ್ರರಾಗಿರುವ ಮನು ಭಾಕರ್ ಅವರಿಗೆ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರ ಕಡೆಯಿಂದ 30 ಲಕ್ಷ ರೂ.ಗಳ ನಗದು ಬಹುಮಾನ ದೊರೆತರೆ, ಅವರ ತವರು ರಾಜ್ಯ ಹರಿಯಾಣ ರಾಜ್ಯ ಸರ್ಕಾರದಿಂದಲೂ ಒಂದು ಕೋಟಿ ರೂಪಾಯಿ ಬಹುಮಾನವಾಗಿ ದಕ್ಕಿದೆ.
ಸರಬ್ಜೋತ್ ಸಿಂಗ್ (Sarabjot Singh) : ಮನು ಭಾಕರ್ ಅವರ ಜೊತೆಗೆ ಹತ್ತು ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಕಂಚಿನ ಪದಕ ಗೆದ್ದಿದ್ದು, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನಗದು ಪ್ರಶಸ್ತಿ ಯೋಜನೆಯ ಮೂಲಕ ಮನ್ಸುಖ್ ಮಾಂಡವಿಯಾ ಅವರು 22.5 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ. ಹರಿಯಾಣ ಸರ್ಕಾರ ಸರ್ಕಾರಿ ಉದ್ಯೋಗ ಆಫರ್ ಕೊಟ್ಟರೂ ಸರಬ್ಜೋತ್ ಅದನ್ನು ತಿರಸ್ಕರಿಸಿದ್ದು, ಆಟದ ಕಡೆ ಇನ್ನಷ್ಟು ಗಮನ ನೀಡಬೇಕು ಎಂದಿದ್ದಾರೆ.
ಸ್ವಪ್ನಿಲ್ ಕುಸಾಲೆ (Swapnil Kusale) : ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಆಗಿದ್ದು, ಅವರ ಈ ಗೆಲುವಿನ ನಂತರ ಕೇಂದ್ರ ರೈಲ್ವೆ ಇಲಾಖೆ ಅವರಿಗೆ ವಿಶೇಷ ಅಧಿಕಾರಿಯಾಗಿ ಬಡ್ತಿಯನ್ನು ನೀಡಿದ್ದು, ಟಿಕೆಟ್ ಕಲೆಕ್ಟರ್ ಆಗಿದ್ದ ಸ್ವಪ್ನಿಲ್ ಈಗ ವಿಶೇಷ ಅಧಿಕಾರಿಯಾಗಿದ್ದಾರೆ. ಇದಲ್ಲದೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಂದ 1 ಕೋಟಿ ರೂ.ಗಳ ಬಹುಮಾನವಾಗಿ ಬಂದಿದೆ.
ಪುರುಷರ ಹಾಕಿ ತಂಡ (Men Hockey Team) : ಸ್ಪೇನ್ ತಂಡವನ್ನು ಮಣಿಸಿದ ಭಾರತ ಪುರುಷರ ಹಾಕಿ ತಂಡವು ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಬಾರಿಗೆ ಕಂಚಿನ ಪದಕವನ್ನು ಗೆದ್ದಿದೆ. ಹಾಕಿ ಇಂಡಿಯಾ ಟೀಂನ ಪ್ರತಿಯೊಬ್ಬ ಸದಸ್ಯರಿಗೆ 15 ಲಕ್ಷ ರೂ, ಸಹಾಯಕ ಸಿಬ್ಬಂದಿಗೆ 7.5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ.
ಇದಲ್ಲದೇ ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಅವರು ಡಿಫೆಂಡರ್ ಅಮಿತ್ ರೋಹಿದಾಸ್ ಅವರಿಗೆ 4 ಕೋಟಿ ರೂ.ಗಳ ಬಹುಮಾನ ಘೋಷಣೆ ಮಾಡಿದ್ದಾರೆ. ಇದೇ ವೇಳೆ ತಂಡದ ಪ್ರತಿ ಆಟಗಾರನಿಗೆ 15 ಲಕ್ಷ ರೂ. ಮತ್ತು ಸಹಾಯಕ ಸಿಬ್ಬಂದಿಗೆ 10 ಲಕ್ಷ ರೂ. ಪ್ರಕಟಿಸಿದ್ದು, ಪಂಜಾಬ್ನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯಕ್ಕೆ ಸೇರಿದ ಎಲ್ಲಾ ತಂಡದ ಸದಸ್ಯರಿಗೆ 1 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ.
ನೀರಜ್ ಚೋಪ್ರಾ (Neeraj Chopra) : ಜಾವೆಲಿನ್ ಥ್ರೋ ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದು ಅವರಿಗೆ ನೀಡಲಾಗುವ ಬಹುಮಾನಗಳ ಬಗ್ಗೆ ಇನ್ನೂ ಕೂಡಾ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಆದರೆ ಅವರಿಗೆ ವಿವಿಧ ಮೂಲಗಳಿಂದ ಬಹುಮಾನ ಸಿಗುವ ನಿರೀಕ್ಷೆಯಂತೂ ಇದೆ.
ಅಮನ್ ಸೆಹ್ರಾವತ್ (Aman Sehrawat) : ಇವರು ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಕ್ರೀಡಾಪಟು ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದು, ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ 57 ಕೆ.ಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಏಕೈಕ ಭಾರತೀಯ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಇವರಿಗೆ ಯಾವೆಲ್ಲಾ ಬಹುಮಾನ ಸಿಗಲಿದೆ ಎನ್ನುವುದು ಸಹಾ ಇನ್ನೂ ಘೋಷಣೆಯಾಗಿಲ್ಲ.