Ranav Ksheerasagar: ದೊಡ್ಮನೆ ಕುಡಿ ಯುವರಾಜ್ ಕುಮಾರ್ (Yuvaraj Kumar) ನಾಯಕನಾಗಿ ಸ್ಯಾಂಡಲ್ವುಡ್ ಗೆ ಯುವ ಸಿನಿಮಾದ ಮೂಲಕ ಭರ್ಜರಿ ಎಂಟ್ರಿಯನ್ನು ನೀಡಿದ್ದಾರೆ. ಮಾರ್ಚ್ 29 ರಂದು ತೆರೆ ಕಂಡ ಈ ಸಿನಿಮಾ ದೊಡ್ಡ ಯಶಸ್ಸನ್ನ ಪಡೆದುಕೊಂಡು ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಮಾಸ್ ಮತ್ತು ಫ್ಯಾಮಿಲಿ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಯುವ ಸಿನಿಮಾವನ್ನು ಸಂತೋಷ್ ಆನಂದ್ರಾಮ್ ಅವರು ನಿರ್ದೇಶನ ಮಾಡಿದ್ದು, ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಮಾಸ್ ಸಿನಿಮಾ ಎಂದ ಮೇಲೆ ಹೀರೋಗೆ ಪೈಪೋಟಿ ನೀಡುವಂತ ವಿಲನ್ ಗಳು ಇರಲೇಬೇಕು. ಆಗಲೇ ನಾಯಕನ ಖದರ್ ಹೆಚ್ಚಾಗೋದು. ಯುವ ಸಿನಿಮಾದಲ್ಲೂ ವಿಲನ್ ಗಳಿಗೆ ಕೊರತೆಯೇನಿಲ್ಲ.
ಯುವ ಸಿನಿಮಾದಲ್ಲೊಬ್ಬ ಯುವ ವಿಲನ್ ಖದರ್ ಆಗಿ ಕಂಡಿದ್ದು, ಎಲ್ಲರ ಗಮನವನ್ನು ಸೆಳೆದಿದ್ದಾರೆ. ಸ್ಮಾರ್ಟ್ ಅಂಡ್ ಡ್ಯಾಷಿಂಗ್ ಹಾಗೂ ಖಡಕ್ ಲುಕ್ ನಲ್ಲಿ ಮಿಂಚಿರುವ ಈ ನಟನ ಹೆಸರು ರಣವ್ ಕ್ಷೀರಸಾಗರ್ (Ranav Ksheerasagar).
ಯುವ ಸಿನಿಮಾದಲ್ಲಿ ನಾಯಕನ ಎದುರು ಟಕ್ಕರ್ ನೀಡುವ, ಹೊಡೆದಾಡುವ ಸ್ಟೂಡೆಂಟ್ ಗ್ಯಾಂಗ್ ಸ್ಟರ್ ಆಗಿ ತೆರೆಯ ಮೇಲೆ ಅಬ್ಬರಿಸಿದ್ದಾರೆ ರಣವ್. ತೆರೆಯ ಮೇಲೆ ರಗಡ್ ಆಗಿ ಕಂಡಿರುವ ರಣವ್ ರಿಯಲ್ ಲೈಫ್ ನಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಮತ್ತು ಸೆನ್ಸಿಬಲ್ ವ್ಯಕ್ತಿ ಆಗಿದ್ದಾರೆ.
ಶಾಲಾ ದಿನಗಳಿಂದಲೇ ನಟನೆಯ ಗೀಳನ್ನು ಹಚ್ಚಿಕೊಂಡಿದ್ದ ರಣವ್ ಅವರು ಬೇಸಿಗೆ ಶಿಬಿರಗಳಲ್ಲಿ ರಂಗಭೂಮಿಯೊಡನೆ ನಂಟನ್ನು ಬೆಳೆಸಿಕೊಂಡರು. ಮೊದಲು ಬಣ್ಣ ಹಚ್ಚಿದ್ದು ಪ್ರಹ್ಲಾದನ ತಂದೆ ಹಿರಣ್ಯ ಕಷಿಪುವಿನಂತಹ ಅದ್ಭುತ ಪಾತ್ರಕ್ಕೆ.
ಸಿನಿಮಾ ರಂಗದಲ್ಲಿ ಅವರು ಮೊದಲು ಬಣ್ಣ ಹಚ್ಚಿದ್ದು ಪುನೀತ್ ರಾಜ್ಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ. ಈಗ ವಿಶೇಷವೆಂದರೆ ಅಂದು ಹಿರಣ್ಯ ಕಷಿಪು ಪಾತ್ರದಲ್ಲಿ ಅಬ್ಬರಿಸಿದ್ದ ಡಾ.ರಾಜ್ಕುಮಾರ್ ಅವರ ಮೊಮ್ಮಗನ ಚೊಚ್ಚಲ ಸಿನಿಮಾದಲ್ಲಿ ರಣವ್ ಖಳನಾಯಕನಾಗಿ ಮಿಂಚಿದ್ದಾರೆ.
ರಣವ್ ಅವರ ಪ್ರತಿಭೆ ನಾಟಕ ಮತ್ತು ಸಿನಿಮಾ ರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ. ರಣವ್ ತಮ್ಮ ಮಾನವೀಯತೆ ಮತ್ತು ಮಾನವ ಕುಲಕ್ಕೆ ಸಲ್ಲಿಸಿದ ಸೇವೆಯಿಂದಾಗಿ ಹಿಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಖಳನಾಯಕರಾಗಿ ಎಂಟ್ರಿ ನೀಡಿ, ಅನಂತರ ಜನ ಮೆಚ್ಚಿದ ನಾಯಕರಾದವರು ಟೈಗರ್ ಪ್ರಭಾಕರ್, ಶಶಿಕುಮಾರ್, ದೇವರಾಜ್ ರಂತಹ ನಾಯಕರ ಹಾದಿಯಲ್ಲಿ ಹೆಜ್ಜೆ ಇಡಲು ಮುಂದಾಗಿರುವ ರಣವ್ ಅವರಲ್ಲೂ ನಾಯಕನಾಗುವ ಲಕ್ಷಣಗಳು ಸ್ಪಷ್ಟವಾಗಿ ಕಂಡಿವೆ.