Vinesh Phogat: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Olympics) ತೂಕದ ಕಾರಣದಿಂದ ಅಂದರೆ ನಿಗಧಿತ ತೂಕಕ್ಕಿಂತ ಹೆಚ್ಚು ಇದ್ದು ಕಾರಣ ಸ್ಪರ್ಧೆಯಿಂದ ಅನರ್ಹಗೊಂಡ ಬಳಿಕ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ( Vinesh Phogat) ನಿವೃತ್ತಿಯನ್ನು ಘೋಷಿಣೆ ಮಾಡಿ, ತಾನು ಇನ್ಮುಂದೆ ಕುಸ್ತಿಗೆ ವಿದಾಯ ಹೇಳುತ್ತಿರುವದಾಗಿ ತಿಳಿಸಿದ್ದರು. ಆದರೆ ಈಗ ವಿನೇಶ್ ಫೋಗಟ್ ತಮ್ಮ ನಿರ್ಧಾರಿಂದ ಹಿಂದೆ ಸರಿಯುವ ಸುಳಿವೊಂದನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.
ವಿನೇಶ್ ಫೋಗಟ್ ಈ ವಿಚಾರವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಸುದೀರ್ಘ ಪೋಸ್ಟ್ ಅನ್ನು ಶೇರ್ ಮಾಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಅವರು, ‘ನಾನಿನ್ನೂ ನನ್ನ ಸಾಧನೆಯ ಗುರಿಯನ್ನು ತಲುಪಿಲ್ಲ. ಬಹುಶಃ ಬೇರೆ ಬೇರೆ ಸನ್ನಿವೇಶಗಳಿಗೆ ಅನುಗುಣವಾಗಿ, ನಾನು 2032ರ ವರೆಗೂ ಆಡುವುದನ್ನು ನೋಡಬಹುದು’ ಎಂದು ಹೇಳಿದ್ದಾರೆ.
ನನ್ನಲ್ಲಿನ ಹೋರಾಟ ಮತ್ತು ಕುಸ್ತಿ ಇನ್ನೂ ಮುಗಿದಿಲ್ಲ. ಭವಿಷ್ಯದಲ್ಲಿ ಏನಾಗಬಹುದೆಂದು ಊಹೆ ಮಾಡಲಾಗದು. ಆದರೆ ನಾನು ನಂಬಿದ ವಿಷಯದಲ್ಲಿ ಯಾವತ್ತೂ ಹೋರಾಡುತ್ತೇನೆ ಎಂದು ವಿನೇಶ್ ತಿಳಿಸಿದ್ದಾರೆ. ಇದೇ ವೇಳೆ ಅವರು ಒಲಂಪಿಕ್ಸ್ ನಲ್ಲಿ ತಮ್ಮ ಜೊತೆಗಿದ್ದ ವೈದ್ಯ ದಿನ್‌ಶಾ ಪರ್ದಿವಾಲಾ, ಸಹಾಯಕ ಸಿಬ್ಬಂದಿ, ಕುಟುಂಬಸ್ಥರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ವಿನೇಶ್ ಅವರ ಈ ಪೋಸ್ಟ್ ಸಹಜವಾಗಿಯೇ ಈಗ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ ಹಾಗೂ ಒಂದಷ್ಟು ಹೊಸ ಚರ್ಚೆಗಳನ್ನು ಇದು ಹುಟ್ಟು ಹಾಕಿದೆ. ಹಾಗಾದರೆ ವಿನೇಶ್ ಮತ್ತೆ ಕುಸ್ತಿಗೆ ಇಳಿಯುತ್ತಾರೇನು? ಎನ್ನುವುದು ಅನೇಕರ ಪ್ರಶ್ನೆಯಾದರೆ, ರಾಜಕೀಯಕ್ಕೆ ಬರಬಹುದೇನೋ ಎಂದೂ ಕೆಲವರು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.