Puttakkana Makkalu: ಕನ್ನಡ ಕಿರುತೆರೆಯಲ್ಲಿ ಸದ್ಯಕ್ಕೆ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯು ಹೊಸ ತಿರುವುಗಳೊಂದಿಗೆ ಪ್ರೇಕ್ಷಕರನ್ನ ಸೆಳೆಯುತ್ತಲೇ ಮುಂದೆ ಸಾಗುತ್ತಿದೆ. ಕಥೆಯಲ್ಲಿ ಮೂಡಿ ಬರುತ್ತಿರುವ ಹೊಸ ಆಯಾಮಗಳು ಇನ್ನಷ್ಟು ಕುತೂಹಲವನ್ನು ಕೆರಳಿಸುತ್ತಿದೆ. ಹಿರಿ ಮಗಳು ದೂರವಾದಳು ಎನ್ನುವ ದುಃಖದಲ್ಲಿ ಪುಟ್ಟಕ್ಕ, ತನ್ನ ಐಎಎಸ್ ಕನಸನ್ನು ನನಸು ಮಾಡಿಕೊಳ್ಳಲು ಅತ್ತೆಯ ಬೆಂಬಲ ಪಡೆದ ಸ್ನೇಹ, ಸಚಿನ್ ಜೊತೆಗಿನ ಸ್ನೇಹದಿಂದ ಪುಟ್ಟಕ್ಕನ ಕೋಪಕ್ಕೆ ಗುರಿಯದ ಸುಮಾ ಹಾಗೂ ಆಧಾರ್ ಕಾರ್ಡ್ ಗಾಗಿ ಮತ್ತೆ ಮನೆ ಕಡೆ ಬರುತ್ತಿರುವ ಸಹನಾ.
ಹೀಗೆ ಧಾರಾವಾಹಿಯಲ್ಲಿ ಕಥೆಯಲ್ಲಿನ ವಿವಿಧ ಮಜಲುಗಳು ಪ್ರೇಕ್ಷಕರನ್ನು ಇನ್ನಷ್ಟು ಮತ್ತಷ್ಟು ತನ್ನ ಕಡೆಗೆ ಸೆಳೆದುಕೊಳ್ಳುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬೇರೆ ಸೀರಿಯಲ್ ಗಳಲ್ಲಿ ಕಥೆಯಲ್ಲಿನ ಒಂದು ಅಂಶ ಮುಂದೆ ಸಾಗುತ್ತಿದ್ದರೆ ಇಲ್ಲಿ ಏಕ ಕಾಲದಲ್ಲಿ ಕಥೆಯಲ್ಲಿನ ಹಲವು ಆಯಾಮಗಳು ಮನರಂಜನೆಯನ್ನು ನೀಡುವಲ್ಲಿ ಬೇರೆಲ್ಲ ಸೀರಿಯಲ್ ಗಳಿಗಿಂತ ವಿಭಿನ್ನವಾಗಿ ಮುಂದೆ ಸಾಗಿದೆ. ವಿಚ್ಛೇದನದ ನಂತರ ತಾಯಿ ಮನೆಯಿಂದ ದೂರವಾದ ಸಹನಾ (Sahana) ಸ್ವಾವಲಂಬಿ ಬದುಕನ್ನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದಾಳೆ.
ದೇವಿಪುರದಲ್ಲಿ ಸಹನಾ ಸತ್ತು ಹೋದಳೆಂದೇ ತಿಳಿದಿದ್ದು, ಪುಟ್ಟಕ್ಕ (Puttakka) ಈಗಾಗಲೇ ಮಗಳ ತಿಥಿಯನ್ನು ಮಾಡುವಾಗ ಉಂಟಾದ ನೋವಿನಿಂದ ಆ ಕಾರ್ಯ ಅರ್ಧಕ್ಕೆ ನಿಂತಿತ್ತು. ಈಗ ಮತ್ತೊಮ್ಮೆ ತಿಥಿ ಕಾರ್ಯವನ್ನು ಮಾಡಲು ಪುಟ್ಟಕ್ಕ ಹಾಗೂ ಮನೆಯವರು ಸಿದ್ಧತೆಗಳನ್ನು ನಡೆಸಿರುವಾಗಲೇ ನಗರದಲ್ಲಿ ತನಗೆ ಆಧಾರ್ ಕಾರ್ಡ್ ನ ಅವಶ್ಯಕತೆ ಇರೋದ್ರಿಂದ ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಲು ಸಹನಾ ದೇವಿಪುರಕ್ಕೆ ಬರಲು ಸಿದ್ಧತೆ ನಡೆಸಿದ್ದಾಳೆ.
ಸ್ವಾವಲಂಬಿ ಬದುಕನ್ನ ಕಟ್ಟಿಕೊಂಡು ಅನಂತರ ಊರಿಗೆ ಮರಳಬೇಕು ಅಂತ ಗಟ್ಟಿ ನಿರ್ಧಾರವನ್ನು ಮಾಡಿದ್ದ ಸಹನಾ ಈಗ ತನ್ನ ಮನಸ್ಸಿನಲ್ಲಿ, ಏನಾದ್ರು ಸಾಧನೆ ಮಾಡಬೇಕು ಅಂತ ಊರು ಬಿಟ್ಟು ಬಂದೆ. ಆದರೆ ಈಗ ಸಾಧನೆಯ ಮೊದಲ ಮೆಟ್ಟಿಲಲ್ಲೇ ಮತ್ತೆ ದೇವಿಪುರಕ್ಕೆ ಹೋಗೋ ಹಾಗೆ ಆಗಿದೆ ಅಂತ ಹೇಳಿಕೊಂಡು ಊರಿನ ಕಡೆ ಹೊರಡೋಕೆ ಸಜ್ಜಾಗಿದ್ದಾಳೆ. ಊರಿಗೆ ಬರುವ ಸಹನಾಳನ್ನ ಪುಟ್ಟಕ್ಕನ ಮನೆಯವರು ನೋಡ್ತಾರಾ? ಸಹನಾ ಬದುಕಿರೋ ವಿಚಾರ ಎಲ್ಲರಿಗೂ ಗೊತ್ತಾಗುತ್ತಾ ಅನ್ನೋದನ್ನ ನೋಡಬೇಕಾಗಿದೆ.