Puttakkana Makkalu: ಕನ್ನಡ ಕಿರುತೆರೆಯ ನಂಬರ್ ಒನ್ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ನಿನ್ನೆಯ ಎಪಿಸೋಡ್ ಬಹಳ ಸುದ್ದಿಯನ್ನು ಮಾಡುತ್ತಿದ್ದು, ಪ್ರೇಕ್ಷಕ ವರ್ಗದಿಂದ ವಿಶೇಷವಾದ ಮೆಚ್ಚುಗೆಗಳು ಹರಿದು ಬರುತ್ತಿದೆ. ಸೀರಿಯಲ್ ನ ಕಥೆಯಲ್ಲಿ ಪುಟ್ಟಕ್ಕನ ಹಿರಿ ಮಗಳು ಸತ್ತಿದ್ದಾಳೆ ಎಂದೇ ಎಲ್ಲರೂ ಭಾವಿಸಿದ್ದು, ಅಪರಿಚಿತ ಶವವನ್ನೇ ಸಹನಾ ಎಂದುಕೊಂಡು ಅದರ ಶವಸಂಸ್ಕಾರವನ್ನು ಸಹಾ ಮಾಡಿ ಮುಗಿಸಿದ್ದಾರೆ. ಈ ವೇಳೆ ಮಗಳನ್ನ ಕಳೆದುಕೊಂಡು ಗೋಳಾಡುವ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅವರ ನಟನೆಗೆ ಪ್ರೇಕ್ಷಕರು ಮಂತ್ರ ಮುಗ್ಧರಾಗಿದ್ದಾರೆ.
ಜೀವಕ್ಕೆ ಜೀವ ಎನಿಸಿದ ಮೂರು ಜನ ಹೆಣ್ಣು ಮಕ್ಕಳಲ್ಲಿ ಪುಟ್ಟಕ್ಕನಿಗೆ ಹಿರಿ ಮಗಳ ಮೇಲೆ ಸ್ವಲ್ಪ ಹೆಚ್ಚಾಗಿಯೇ ಕಾಳಜಿ. ಏಕೆಂದರೆ ಕಿರಿ ವಯಸ್ಸಿನಿಂದಲೇ ಮೆಸ್ ನಲ್ಲಿ ಕೆಲಸ ಮಾಡುತ್ತಾ, ತಂಗಿಯರ ಆರೈಕೆ ಮಾಡುತ್ತಾ ಬೆಳೆದವಳು ಸಹನಾ. ಅಂತಹ ಮಗಳನ್ನು ಕಳೆದುಕೊಂಡ ಪುಟ್ಟಕ್ಕ ತಾಯಿಯಾಗಿ ಕಣ್ಣೀರಿಡುವ ಆಕ್ರಂದನ ಮುಗಿಲು ಮುಟ್ಟಿದ್ದು ನೋಡುಗರ ಮನಸ್ಸನ್ನು ಭಾವುಕರನ್ನಾಗಿ ಮಾಡಿದೆ.
ಚಿತೆಯ ಮೇಲಿರುವ ಮಗಳ ದೇಹವನ್ನು ನೋಡ್ತಾ ನಾನೇ ಪಾಪಿ, ನಾನೇ ಆ ಮಗುನ ಅತ್ತೆ ಮನೆಗೆ ಹೋಗು ಅಂತ ಹೇಳಿ ಹೇಳಿ ಈಗ ಆ ಮಗೂನ ನಾನೇ ಬೆಂಕಿಗೆ ಹಾಕಿ ಬಿಟ್ಟೆ ಎಂದು ತನ್ನ ಎದೆ ಬಡಿದುಕೊಂಡು ಕಣ್ಣೀರು ಹಾಕೋ ದೃಶ್ಯದಲ್ಲಿ ಉಮಾಶ್ರೀ ಅವರು ಮನೋಜ್ಞವಾಗಿ ನಟಿಸಿದ್ದು, ನೋಡುಗರ ಕಣ್ಣಲ್ಲಿ ನೀರನ್ನು ತರಿಸುವ ಹಾಗೆ ನಟನೆಯನ್ನು ಪ್ರದರ್ಶನ ಮಾಡಿ ಅಸಂಖ್ಯಾತ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.
ಮಗಳು ಶಾಶ್ವತವಾಗಿ ದೂರ ಆಗೇ ಬಿಟ್ಟಳು ಅನ್ನೋ ನೋವಲ್ಲಿ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುವುದನ್ನು ನೋಡಿ ವೀಕ್ಷಕರ ಕಣ್ಣಾಲಿಗಳು ಸಹಾ ಒದ್ದೆಯಾಗಿದೆ. ಉಮಾಶ್ರೀ ಅವರ ಇಂತಹ ಪ್ರಬುದ್ಧ ಮತ್ತು ನ್ಯಾಚುರಲ್ ಆಗಿ ಕಾಣುವಂತಹ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.