Kareena Kapoor: ಬಾಲಿವುಡ್ ನಲ್ಲಿ (Bollywood) ಕಳೆದ ಇಪ್ಪತ್ತು ವರ್ಷಗಳಿಂದಲೂ ಸಕ್ರಿಯವಾಗಿರುವ ನಟಿ ಕರೀನಾ ಕಪೂರ್ (Kareena Kapoor) ಅವರಿಗೆ ವಯಸ್ಸು ಏರುತ್ತಿದ್ದರೂ ಅವಕಾಶಗಳಿಗೆ ಕೊರತೆ ಏನಿಲ್ಲ ಎನ್ನುವಂತೆ ಸಾಲು ಸಾಲು ಸಿನಿಮಾಗಳ ಆಫರ್ ಅವರನ್ನು ಅರಸಿ ಹೋಗುತ್ತಿದ್ದು, ಇಂದಿಗೂ ತಮ್ಮ ಸ್ಟಾರ್ ನಟಿಯೆಂಬ ಸ್ಥಾನಮಾನವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಬಾಲಿವುಡ್ ನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆಯನ್ನು ಶೇರ್ ಮಾಡಿಕೊಂಡಿರೋ ಕರೀನಾ ಹಿರಿಯ ನಟ ಸೈಫ್ ಅಲಿ ಖಾನ್ ಪತ್ನಿಯಾಗಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೇ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ ತಬು (Tabu) ಮತ್ತು ಕೃತಿ ಸನೋನ್ (Kriti Sanon) ಜೊತೆಗೆ ಕರೀನಾ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಿನಿಮಾವೊಂದು ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಪಡೆದುಕೊಂಡು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಮೊದಲಿನಂತೆ ಹೆಚ್ಚು ಸಿನಿಮಾಗಳನ್ನು ಮಾಡದೇ ಹೋದರೂ ಕರೀನಾ ತಮ್ಮ ಫ್ಯಾಷನ್ ಸೆನ್ಸ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಲೇ ಇರುತ್ತಾರೆ.
ಇನ್ನು ಕರೀನಾ ಅವರ ಐಶಾರಾಮೀ ಜೀವನ ಶೈಲಿ, ಬಳಸುವ ದುಬಾರಿ ಬೆಲೆಯ ವಸ್ತುಗಳು, ಮಕ್ಕಳ ಆರೈಕೆಗಾಗಿ ನೇಮಕ ಮಾಡಿರುವ ದಾದಿಯರ ವೇತನದ ವಿಚಾರವಾಗಿ ಸುದ್ದಿಯಾಗುವುದು ಮಾತ್ರವೇ ಅಲ್ಲದೇ ಬಾಲಿವುಡ್ ಹಾಗೂ ಅನ್ಯ ಸಿನಿಮಾ ರಂಗಗಳ ನಟ, ನಟಿಯರ ಕುರಿತಾಗಿ ನಿರ್ಲಕ್ಷ್ಯದಿಂದ ನೀಡುವ ಹೇಳಿಕೆಗಳಿಂದಾಗಿ ಒಂದಷ್ಟು ಟ್ರೋಲ್ ಆಗುವುದು ಕೂಡಾ ಕರೀನಾ ವಿಚಾರದಲ್ಲಿ ತೀರಾ ಸಾಮಾನ್ಯವಾದಂತಹ ಸಂಗತಿಯಾಗಿದೆ.
ಇದೀಗ ನಟಿ ದಿ ಕ್ರ್ಯೂ ಸಿನಿಮಾದ ವಿಚಾರವಾಗಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾನು ತನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳು ಗಳನ್ನು ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಸೂಪರ್ ಹಿಟ್ ಸಿನಿಮಾ ಜಬ್ ವಿ ಮೆಟ್ ಗೆ ಮೊದಲು ಸಾಕಷ್ಟು ತೊಂದರೆಗಳನ್ನು ತಾನು ಎದುರಿಸಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.
ಆಗ ನನ್ನ ಕೆರಿಯರ್ ಬಹಳ ಡಲ್ ಆಗಿತ್ತು. ಒಂದು ಸಕ್ಸಸ್ ಸಿನಿಮಾದ ಅಗತ್ಯ ಇತ್ತು. ಆಗೆಲ್ಲಾ ನಾನು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಅನಂತರ ನಾನು ನನ್ನ ಜೀವನವನ್ನು ಯೋಜಿಸಿ ರೂಪಿಸಿಕೊಂಡಿದ್ದೇನೆ ಮತ್ತು ಅಭಿಮಾನಿಗಳಿಂದ ಅಪಾರವಾದ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದೇನೆ ಎನ್ನುವ ಮಾತುಗಳನ್ನು ಕರೀನಾ ಹೇಳಿಕೊಂಡಿದ್ದಾರೆ.