Crime News: ತನ್ನ ಸಹೋದರನಿಂದಲೇ ಅತ್ಯಾಚಾರಕ್ಕೆ ಒಳಗಾದ ಹನ್ನೆರಡು ವರ್ಷದ ಬಾಲಕಿಯ ಗರ್ಭಪಾತಕ್ಕೆ ಕೋರ್ಟ್ ಅನುಮತಿಯನ್ನು ನೀಡಿದೆ. ಬಾಂಬೆ ಹೈಕೋರ್ಟ್ ನ (Bombay High court) ರಜಾಕಾಲದ ಪೀಠದ ನ್ಯಾಯಾಧೀಶರಾದ ಸಂದೀಪ್ ಮರ್ನೆ ಹಾಗೂ ನೀಲಾ ಗೋಖಲೆ ಅವರು ವೈದ್ಯಕೀಯ ಸಮಿತಿಯು ಸಲ್ಲಿಸಿರುವಂತಹ ವರದಿಯನ್ನು ಆಧರಿಸಿ ಈ ತೀರ್ಪನ್ನು ನೀಡಲಾಗಿದೆ. ಈ ವೇಳೆ ಕೋರ್ಟ್ ಬಾಲಕಿಯ ಸುರಕ್ಷತೆ ಮತ್ತು ಆಕೆಯ ಯೋಗಕ್ಷೇಮವೇ ಮೊದಲ ಆದ್ಯತೆ ಎಂದು ನ್ಯಾಯಾಲಯವು ಹೇಳಿದೆ.
ಪರಿಸ್ಥಿತಿಯ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು, ಅಪ್ರಾಪ್ತ ಬಾಲಕಿಯ ಕಲ್ಯಾಣ ಹಾಗೂ ಸುರಕ್ಷತೆ ಅತ್ಯಂತ ಮಹತ್ವದ್ದಾಗಿರುತ್ತೆ ಎಂಬುದಾಗಿ ಪೀಠವು ಹೇಳಿದೆ. ಹನ್ನೆರಡು ವರ್ಷದ ಬಾಲಕಿಯನ್ನು ಆಕೆಯ ಹದಿನಾಲ್ಕು ವರ್ಷ ವಯಸ್ಸಿನ ಸಹೋದರನೇ ಅತ್ಯಾಚಾರವನ್ನು (Crime News) ಮಾಡಿದ್ದಾನೆ ಎಂದು ಆತನ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ. ಬಾಲಕಿಯ ತಾಯಿ ಮಗಳ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಕೋರ್ಟ್ ನಲ್ಲಿ ಮನವಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿವರಗಳಿಗೆ ಬಂದರೆ, ಬಾಲಕಿಯು ಈ ತಿಂಗಳ ಆರಂಭದಲ್ಲಿ ಹೊಟ್ಟೆ ನೋವು ಎಂದು ತನ್ನ ತಾಯಿಗೆ ಹೇಳಿದ್ದಾಳೆ. ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದಾಗ ವೈದ್ಯರು ಆಕೆ ಗರ್ಭ (Pregnancy) ಧರಿಸಿರುವ ವಿಚಾರವನ್ನು ತಿಳಿಸಿದ್ದಾರೆ. ನಂತರ ಬಾಲಕಿಯನ್ನು ವಿಚಾರಿಸಿದಾಗ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅಣ್ಣನೇ ತನ್ನೊಡನೆ ಒತ್ತಾಯಪೂರ್ವಕವಾಗಿ ದೈಹಿಕ ಸಂಬಂಧವನ್ನು ಮಾಡಿದ್ದನು ಎಂದು ತಿಳಿಸಿದ್ದಾಳೆ.
ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಬೆದರಿಸಿದ್ದನು ಎಂಬುದಾಗಿಯೂ ತಿಳಿಸಿದ್ದಾಳೆ. ವಿಚಾರ ತಿಳಿದ ತಾಯಿಯು ಪೋಲಿಸರಿಗೆ ದೂರನ್ನು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯಡಿಯಲ್ಲಿ ಬಾಲಕಿಯ ಅಣ್ಣನ ವಿರುದ್ಧ ಕೇಸು ದಾಖಲಿಸಿ, ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನಂತರ ಬಾಂಬೆ ಹೈಕೋರ್ಟ್ ರಜಾಕಾಲದ ಪೀಠದ ನ್ಯಾಯಾಧೀಶರು ಬಾಲಕಿಗೆ ತಾನು ಗರ್ಭಿಣಿ ಎಂದು ತಿಳಿದಿರಲಿಲ್ಲ, ವೈದ್ಯಕೀಯ ಮಂಡಳಿಯು ಗರ್ಭಾವಸ್ಥೆ ಮುಂದುವರೆದರೆ ಅದು ಬಾಲಕಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದೆಂದು ಅಭಿಪ್ರಾಯ ಪಟ್ಟಿರುವುದರಿಂದ, ಬಾಲಕಿಯ ಸುರಕ್ಷತೆ ಮೊದಲ ಅದ್ಯತೆಯಾಗಿದ್ದು, ಗರ್ಭಪಾತ ಮಾಡಬಹುದು ಎಂದು ತಿಳಿಸಿದೆ.