Actress Hamsa : ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಪುಟ್ಟಕ್ಕನ ಸವತಿ ಪಾತ್ರವಾದ ರಾಜಿ ಪಾತ್ರದ ಗತ್ತು ಬಹಳ ಜೋರಾಗಿತ್ತು. ಸೀರಿಯಲ್ ಆರಂಭ ಆದಾಗಿನಿಂದ ಈ ಪಾತ್ರದಲ್ಲಿ ಮಿಂಚಿದವರು ನಟಿ ಹಂಸ (Actress Hamsa). ನಂತರ ಬಿಗ್ ಬಾಸ್ ಗೆ (Bigg Boss Kannada 11) ಎಂಟ್ರಿ ನೀಡಿದ ಅವರು ಮನೆಯಲ್ಲಿ ನಾಲ್ಕು ವಾರಗಳ ಕಾಲ ಇದ್ದು, ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡಿದರು ಹಂಸ. ಆದರೆ ಇದೇ ವೇಳೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ರಾಜಿ ಪಾತ್ರ ಕಾಣೆಯಾಗಿದೆ. ಆ ಪಾತ್ರ ಏನಾಯ್ತು ಅನ್ನೋ ಚಿಂತೆಯಲ್ಲಿ ಅಭಿಮಾನಿಗಳು ಇದ್ದಾರೆ ಮತ್ತು ರಾಜಿ ವಾಪಸ್ಸು ಬರೋದು ಯಾವಾಗ ಅಂತ ಕಾಯ್ತಿದ್ದಾರೆ.
ಇವೆಲ್ಲವುಗಳ ನಡುವೆ ಯೂಟ್ಯೂಬ್ ಚಾನಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಿರ್ದೇಶಕ ಆರೂರು ಜಗದೀಶ್ (Aroor Jagadish) ಅವರು, ಹಂಸ ಬಿಗ್ ಬಾಸ್ ಗೆ ಹೋಗುವ ವಿಚಾರವನ್ನು ತಿಳಿಸದೆ ಸೀರಿಯಲ್ ಇಂದ ಹೊರ ನಡೆದರು ಎಂದು ಹೇಳುವ ಮೂಲಕ ದೊಡ್ಡ ಶಾಕ್ ಅನ್ನು ನೀಡಿದ್ದರು. ಅವರು ಬಿಗ್ ಬಾಸ್ ಗೆ ಹೋಗುವ ವಿಷಯ ಹೇಳಿದ್ದರೆ ನಾವು ಖಂಡಿತ ಬೇಡ ಅಂತ ಹೇಳುತ್ತಿರಲಿಲ್ಲ, ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಕಲಾವಿದರಿಗೆ ನೈತಿಕತೆ ಮುಖ್ಯ ಎನ್ನುವ ಮಾತನ್ನು ಹೇಳಿ, ಹಂಸ ವಿರುದ್ಧ ದೂರು ಕೊಟ್ಟಿದ್ದೇವೆ ಎಂದಿದ್ದರು.
ಆರೂರು ಜಗದೀಶ್ ಅವರು ಆಡಿದ ಮಾತಿಗೆ ನಟಿ ಹಂಸ ತಿರುಗೇಟನ್ನ ನೀಡಿದ್ದಾರೆ. ಅವರು ಕೂಡಾ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡುತ್ತಾ, ನಾನು 20 ವರ್ಷಗಳಿಂದ ನಟನಾ ವೃತ್ತಿಯಲ್ಲಿ ಇದ್ದವಳು. ನಾನು ಮೊದಲೇ ಫೇಮಸ್ , ನನ್ನಿಂದ ಇವರು ಕಾಸು ಮಾಡಿಕೊಂಡರೇ ಹೊರತು ಅವರು ಹೇಳಿದ ಹಾಗೆ, ಅವರು ಕೊಟ್ಟ ಪಾತ್ರದಿಂದ ನಾನು ಫೇಮಸ್ ಆದವಳಲ್ಲ. ಇದು ತುಂಬಾ ತಪ್ಪು. ಇಷ್ಟಕ್ಕೂ ರಾಜಿ ಪಾತ್ರಕ್ಕೆ ಹೆಚ್ಚು ಅವಕಾಶವೇ ಇರ್ಲಿಲ್ಲ. ವಾರದಲ್ಲಿ ಐದಾರು ದಿನ ಶೂಟಿಂಗ್ ಇರುತ್ತೆ ಎಂದಿದ್ರು, ಆದರೆ ಅದು ಎರಡು ಮೂರು ದಿನಕ್ಕೆ ಇಳಿದಿತ್ತು.
ಮೂರು ವರ್ಷದಿಂದ ಪೇಮೆಂಟ್ ಕೂಡಾ ಹೆಚ್ಚು ಮಾಡಲಿಲ್ಲ. ನನಗೆ ನೈತಿಕತೆ ಇದ್ದುದರಿಂದಲೇ ಮೂರು ವರ್ಷ ಅಲ್ಲೇ ಇದ್ದೆ. ಇಲ್ಲದೇ ಹೋಗಿದ್ದರೆ ಯಾವಾಗಲೋ ಹೊರಕ್ಕೆ ಬರುತ್ತಿದ್ದೆ. ನನ್ನಿಂದ ಕಾಸು ಮಾಡಿಕೊಂಡು ನೈತಿಕತೆ ಬಗ್ಗೆ ಹೇಳುವ ಅಧಿಕಾರ ಅವರಿಗೆ ಇಲ್ಲ ಎಂದಿರುವ ಹಂಸ ಅವರು ಬಿಗ್ ಬಾಸ್ ನಂತಹ ದೊಡ್ಡ ವೇದಿಕೆಗೆ ಅವಕಾಶ ಸಿಕ್ಕಾಗ ಇವರನ್ನೇ ನಂಬಿಕೊಂಡು ಕುಳಿತುಕೊಳ್ಳೋಕೆ ಆಗುತ್ತಾ? ನನಗೂ ಫ್ಯಾಮಿಲಿ ಇದೆ, ಕಮಿಟ್ಮೆಂಟ್ ಇದೆ, ಸಂಬಳವನ್ನು ಜಾಸ್ತಿ ಮಾಡದೇ ಇರುವಾಗ ಅದೇ ಹಣವನ್ನು ನಂಬಿ ಕುಳಿತುಕೊಳ್ಳಲು ಆಗುವುದಿಲ್ಲ. ಇಂಥವರು ನೈತಿಕತೆ ಬಗ್ಗೆ ನನಗೆ ಪಾಠ ಮಾಡುವುದು ಸರಿ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಹಂಸ.