P. C Mohan: ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸಂಸದನಾಗಿ ಮೂರು ಬಾರಿ ಆಯ್ಕೆಗೊಂಡಿರುವ, ಈಗ ಮತ್ತೊಮ್ಮೆ ಅಂದರೆ ನಾಲ್ಕನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿರುವ ಪಿ.ಸಿ. ಮೋಹನ್ (P C Mohan) ಅವರು, ಇದುವರೆಗಿನ 15 ವರ್ಷಗಳಲ್ಲಿ ತಾನು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ತನಗೆ ಬಲ ಎನ್ನುವ ಮಾತನ್ನು ಹೇಳಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪಿ.ಸಿ. ಮೋಹನ್ ಅವರು ಸತತ ಮೂರು ಅವಧಿಯಲ್ಲಿ ಸಂಸದರಾಗಿ ಆಯ್ಕೆಯಾಗಿರುವ ತಾನು, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು, ಜನಾನುರಾಗಿ ಕಾರ್ಯಕ್ರಮಗಳನ್ನು ಮಾಡಿರುವುದಾಗಿ ಹೇಳಿದ್ದಾರೆ.
ಬೆಂಗಳೂರಿನ ಐಟಿ ಹಬ್ ಗಳು ನನ್ನ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿವೆ ಎಂದಿರುವ ಅವರು, ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವಂತಹ ಕಂಪನಿಗಳಿಗೆ ಅಗತ್ಯ ಇರುವಂತಹ ಎಲ್ಲಾ ರೀತಿಯ ಮೂಲಸೌಕರ್ಯಗಳು ದೊರೆಯುವಂತೆ ಮಾಡಿದ್ದೇನೆಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು, ಇಂತಹ ಕಂಪನಿಗಳಲ್ಲಿ ಉದ್ಯೋಗ ನಿರ್ವಹಣೆಗೆ ದೇಶದ ವಿವಿಧ ಕಡೆಗಳಿಂದ ಬಂದಿರುವಂತಹ ಜನರಿಗೆ ವಾಸಕ್ಕೆ ಯೋಗ್ಯವಾದ ಸ್ಥಳಗಳನ್ನು ನಿರ್ಮಿಸಲಾಗಿದೆ.
ಅಲ್ಲದೇ ಅಗತ್ಯ ಇರುವ ಮೂಲ ಸೌಕರ್ಯಗಳಾದ ರಸ್ತೆ, ನೀರಿನಂತಹ ವ್ಯವಸ್ಥೆ ಮಾಡಲಾಗಿದೆ. ಇಂತಹ ಕೆಲಸಗಳು ಚುನಾವಣೆಯಲ್ಲಿ ನನ್ನ ಕೈ ಹಿಡಿಯಲಿವೆ ಎಂದು ಸಂಸದ ಪಿ.ಸಿ ಮೋಹನ್ ಅವರು ಹೇಳಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳಿಗಳೊಂದಿಗೆ, ವ್ಯಾಪಾರಿಗಳೊಂದಿಗೆ, ಉದ್ದಿಮೆಗಳೊಂದಿಗೆ, ನಾಗರಿಕ ಒಕ್ಕೂಟಗಳೊಂದಿಗೆ, ನಿವಾಸಿಗಳ ಸಂಘಗಳ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದೇನೆ.
ಪ್ರತಿಯೊಬ್ಬರ ಆಶೋತ್ತರಗಳನ್ನು ಈಡೇರಿಸುವ ಕಾರ್ಯವನ್ನು ಮಾಡಿದ್ದೇನೆ. ಅವರೆಲ್ಲರೂ ನನ್ನ ಗೆಲುವಿಗೆ ಬೆಂಬಲವನ್ನು ನೀಡಲಿದ್ದಾರೆ. ಅವರು ನನ್ನಿಂದ ನಿರೀಕ್ಷೆ ಮಾಡುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ನಾನು ಕೈಗೊಳ್ಳಲಿದ್ದೇನೆ ಎಂದು ಪಿ ಸಿ ಮೋಹನ್ ಅವರು ಭರವಸೆಯನ್ನು ಸಹಾ ನೀಡಿದ್ದಾರೆ.