Tirumala Tirupati : ಆಂಧ್ರಪ್ರದೇಶದಲ್ಲಿ ತಿರುಮಲ ಶ್ರೀವೆಂಕಟೇಶ್ವರ (Tirumala Tirupati) ದೇಗುಲದಲ್ಲಿ ನೀಡಲಾಗುವ ಲಡ್ಡು ಪ್ರಸಾದ ವಿವಾದವು ಇಡೀ ದೇಶದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು (CM Chandrababu) ಅವರ ನೂತನ ಸರ್ಕಾರವು ಈ ವಿಚಾರವಾಗಿ ತನಿಖೆಗೆ ಆದೇಶವನ್ನು ನೀಡಿದೆ. ಹಿಂದೂಗಳು ಪರಮ ಪಾವಿತ್ರ್ಯ ಎಂದೇ ತಿಳಿದಿರುವ ಶ್ರೀವಾರಿ ಲಡ್ಡು ವಿವಾದ ಈಗ ಅಸಮಾಧಾನಕ್ಕೆ ಕಾರಣವಾಗಿದೆ.
ಈಗ ಇದರ ಬೆನ್ನಲ್ಲೇ, ಈ ಹಿಂದೆ ಆಲಯದಲ್ಲಿ ಪ್ರಧಾನ ಅರ್ಚಕರಾಗಿ ಕೆಲಸವನ್ನು ಮಾಡಿದ್ದಂತಹ ರಮಣ್ ದೀಕ್ಷಿತ್ (Raman Dikshit) ಅವರು ಈ ಘಟನೆ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, ಕಳೆದೈದು ವರ್ಷಗಳಿಂದ ನಮ್ಮ ಕಣ್ಣೆದುರೇ ಈ ಮಹಾಪಾಪ ನಡೆಯುವುದನ್ನು ನೋಡುತ್ತಿದ್ದೇವೆ ಎಂದಿದ್ದಾರೆ. ಶ್ರೀಗಳ ನೈವೇದ್ಯಕ್ಕೆ ಬಳಸುವ ಸಾಮಗ್ರಿಗಳು ಕೀಳುಮಟ್ಟದಲ್ಲಿವೆ ಎಂದು ನಾನೊಬ್ಬನೇ ಹಲವು ಬಾರಿ ದೂರು ನೀಡಿದ್ದೇನೆ.
ನಾನು ಈ ಬಗ್ಗೆ ಧ್ವನಿ ಎತ್ತಿದಾಗ ನನಗೆ ಯಾರೂ ಬೆಂಬಲವನ್ನು ನೀಡಲಿಲ್ಲ. ಈಗ ಲಡ್ಡು ಸುದ್ದಿ ನೋಡಿದರೆ ನಮಗೆ ತುಂಬಾ ನೋವಾಗುತ್ತಿದೆ. ಕಲಬೆರಕೆ ತುಪ್ಪ ಬಳಸಿಕೊಂಡು ಪ್ರಸಾದವನ್ನು ಮಾಡುವುದು ಮಹಾ ಪಾಪ ಎಂದು ರಮಣ್ ದೀಕ್ಷಿತ್ ಅವರು ಹೇಳಿದ್ದಾರೆ. ಅಲ್ಲದೇ ಸ್ವಾಮಿ ಅವರಿಗೆ ಅರ್ಪಿಸುವ ನೈವೇದ್ಯದ ಪ್ರಮಾಣವನ್ನು ಸಹಾ ಕಡಿಮೆ ಮಾಡಲಾಗಿತ್ತು ಎಂದಿದ್ದಾರೆ.
ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಪದ್ಧತಿಯನ್ನು ಬದಲಾಯಿಸಬಾರದು. ಚಂದ್ರಬಾಬು ಅವರು ಅಧಿಕಾರಕ್ಕೆ ಬಂದ ಮೇಲೆ ಮತ್ತೆ ತಿರುಮಲದಲ್ಲಿ ಸ್ವಚ್ಛತೆ ಆರಂಭವಾಗಿದೆ ಹಾಗೂ ಸದ್ಯಕ್ಕೆ ನಂದಿನಿ ಡೈರಿಯಿಂದ ಗುಣಮಟ್ಟದ ತುಪ್ಪವನ್ನು ಪ್ರಸಾದಕ್ಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.