Actress Sada: ಒಂದು ಕಾಲದಲ್ಲಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸದಾ (Actress Sada) ಈಗ ಅವಕಾಶಗಳು ಕಡಿಮೆಯಾಗಿ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಆದರೆ ಕಿರುತೆರೆಯಲ್ಲಿ ನಟಿ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಜಯಂ (Jayam) ಸಿನಿಮಾ ಮೂಲಕ ತೆಲುಗಿನಲ್ಲಿ ಕೆರಿಯರ್ ಆರಂಭಿಸಿದ ನಟಿ ಅಲ್ಪ ಸಮಯದಲ್ಲೇ ತೆಲುಗು ಮತ್ತು ತಮಿಳು ಎರಡೂ ಕಡೆಗಳಲ್ಲೂ ಜನಪ್ರಿಯತೆಯನ್ನು ಪಡೆದುಕೊಂಡರು. ಕನ್ನಡದಲ್ಲಿ ಮೊನಾಲಿಸಾ ಸಿನಿಮಾದಲ್ಲಿ ನಾಯಕಿಯಾಗಿದ್ದರು ಸದಾ.
ನಟಿ ಸದಾಗೆ ಆರಂಭದಲ್ಲಿ ಸಿಕ್ಕ ಜಯ ಅನಂತರ ಸಿಗಲಿಲ್ಲ. ಸಾಲು ಸಾಲು ಸಿನಿಮಾಗಳ ಸೋಲು, ಸಿನಿಮಾಗಳ ಆಯ್ಕೆಯಲ್ಲಿ ನಟಿ ಎಡವಿದ್ದು ಎಲ್ಲವೂ ಕ್ರಮೇಣ ನಟಿಯ ಬೇಡಿಕೆಯನ್ನು ಕಡಿಮೆ ಮಾಡಿತ್ತು. ಸದಾ ಇಂಡಸ್ಟ್ರಿಗೆ ಅಡಿಯಿಟ್ಟ ದಿನಗಳಲ್ಲಿ ಸಿನಿಮಾಕ್ಕೆ ಕಾಲಿಟ್ಟ ಬೇರೆ ನಟಿಯರು ಜನಪ್ರಿಯತೆ ಪಡೆದರು. ನಟಿ ಸದಾ ಅವರಿಗೆ ಈಗ 39 ವರ್ಷ ವಯಸ್ಸು. ಆದರೆ ಇನ್ನೂ ಒಂಟಿಯಾಗಿಯೇ ಇರುವ ಸದಾ ಅವರಿಗೆ ಇತ್ತೀಚಿಗೆ ಮದುವೆ ವಿಚಾರವಾಗಿ ಪ್ರಶ್ನೆಯೊಂದು ಎದುರಾಗಿದೆ.
ನಟಿಯು, ನಾನು ಮದುವೆ ವಿರೋಧಿ ಖಂಡಿತ ಅಲ್ಲ. ಆದರೆ ನನಗೆ ಅರೇಂಜ್ಡ್ ಮ್ಯಾರೇಜ್ ಇಷ್ಟ ಇಲ್ಲ. ಯಾರೋ ಗೊತ್ತಿಲ್ಲದ ವ್ಯಕ್ತಿಯ ಜೊತೆಗೆ ಮದುವೆಯಾಗಿ, ಅವರ ಜೊತೆಗೆ ಜೀವನ ಮಾಡುವುದು ಕಷ್ಟ. ನನಗೆ ಲವ್ ಮ್ಯಾರೇಜ್ ಇಷ್ಟ ಎನ್ನುವ ಮಾತುಗಳನ್ನು ಹೇಳಿದ್ದಾರೆ. ನನ್ನ ತಂದೆ ತಾಯಿ ಕೂಡಾ ಪ್ರೇಮ ವಿವಾಹ ಆಗಿರೋದ್ರಿಂದ ನನಗೂ ಕೂಡಾ ಅದೇ ಇಷ್ಟ ಎಂದಿದ್ದಾರೆ ಸದಾ.
ನಾನು ಇಲ್ಲಿಯವರೆಗೆ ಮದುವೆ ಆಗದೇ ಒಬ್ಬಂಟಿಯಾಗಿರುವುದಕ್ಕೆ ಕಾರಣ, ನನಗೆ ಸರಿಯಾದ ವ್ಯಕ್ತಿ ಸಿಗದೇ ಇರುವುದು. ನಾನು ನನ್ನ ವೈಯಕ್ತಿಕ ಜೀವನದಲ್ಲಿ ಮತ್ತು ವೃತ್ತಿ ಜೀವನದಲ್ಲಿ ಸಂತೋಷವಾಗಿದ್ದೇನೆ. ಆದರೆ ಒಂದು ವೇಳೆ ಮದುವೆಯಾದರೆ ಇಷ್ಟು ಸಂತೋಷ ಸಿಗುತ್ತದೆ ಎನ್ನುವ ಭರವಸೆ ನನಗಿಲ್ಲ ಎಂದು ಸಹಾ ನಟಿ ಮದುವೆಯ ವಿಚಾರವಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.