Rashmika Mandanna: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕೆ ಟಾಲಿವುಡ್ ಮತ್ತು ಬಾಲಿವುಡ್ ಎರಡೂ ಕಡೆಗಳಲ್ಲಿಯೂ ಸಹಾ ಬೇಡಿಕೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ. ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಗೆ (Salman Khan) ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ರಶ್ಮಿಕಾ ಈಗ ಭರ್ಜರಿಯಾಗಿ ಸುದ್ದಿಯಾಗಿದ್ದಾರೆ. ಇವೆಲ್ಲವುಗಳ ನಡುವೆಯೇ ನಟಿಯು ಈಗ ಕಳೆದ ಹತ್ತು ವರ್ಷಗಳಲ್ಲಿ ಭಾರತ (India) ಕಂಡ ಅಭಿವೃದ್ಧಿಯ ಕುರಿತಾಗಿ ಮಾತನಾಡಿ, ಮೆಚ್ಚುಗೆ ಯನ್ನು ನೀಡಿದ್ದಾರೆ.
ಇದೇ ವರ್ಷಾರಂಭದಲ್ಲಿ ಅಂದರೆ ಜನವರಿ ಮಾಹೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ (Narendra Modi) ಉದ್ಘಾಟನೆಯಾದಂತಹ ಅಟಲ್ ಸೇತು (Atal Sethu) ಕುರಿತಾಗಿ ಮತ್ತು ದೇಶದಲ್ಲಿನ ಒಟ್ಟಾರೆ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತಾಗಿ ನಟಿ ರಶ್ಮಿಕಾ ಬಹಳ ಹೆಮ್ಮೆಯಿಂದ ಮಾತನಾಡಿದ್ದು, ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ನವಿ ಮುಂಬೈನಿಂದ ಮುಂಬೈಗೆ ಪ್ರಯಾಣವನ್ನು ಮಾಡೋದಕ್ಕೆ ಎರಡು ಗಂಟೆಗಳ ಸಮಯ ಹಿಡೀತಿತ್ತು.
ಈಗ 20 ನಿಮಿಷಗಳಲ್ಲಿ ಪ್ರಯಾಣವನ್ನು ಮಾಡಬಹುದಾಗಿದೆ, ಅಸಾಧ್ಯ ಅನ್ನೋದನ್ನ ಅವರು ಸಾಧಿಸಿ ತೋರಿಸಿದ್ದಾರೆ. ಅಲ್ಲದೇ ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ಗೆ ಹೋಗುವ ರಸ್ತೆಗಳಲ್ಲೂ ಪ್ರಯಾಣ ಮಾಡುವುದನ್ನು ಸುಲಭ ಮಾಡಿದ್ದಾರೆ. ಭಾರತವು ಈ ರೀತಿ ಅಭಿವೃದ್ಧಿಯಾಗುತ್ತಿರುವುದನ್ನ ನೋಡಿದಾಗ ಹೆಮ್ಮೆ ಅನಿಸುತ್ತದೆ ಎಂದಿದ್ದಾರೆ ರಶ್ಮಿಕಾ.
ಭಾರತವು ಈಗ ಎಲ್ಲೂ ನಿಲ್ಲದೇ ವೇಗವಾಗಿ ಮುಂದೆ ಸಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ. ಅಭಿವೃದ್ಧಿ ಅನ್ನೋದು ಬಹಳ ಬೇಗೆ ಆಗ್ತಿದೆ. ಅಟಲ್ ಸೇತು ಏಳು ವರ್ಷಗಳಲ್ಲಿ ನಿರ್ಮಾಣ ಆಗಿದ್ಯಂತೆ. ಹೊಸ ಭಾರತ ಉದಯ ಆಗ್ತಿದೆ. ಭಾರತ ವಿಶ್ವದ ಬುದ್ಧಿವಂತ ದೇಶ ಎಂದು ಹೇಳಲು ಬಯಸುತ್ತೇನೆ.
ಭಾರತದ ಯುವಕರು ಜವಾಬ್ದಾರಿಯುತವಾಗಿ ಮತವನ್ನು ಹಾಕಬೇಕು ಮತ್ತು ನಮ್ಮ ದೇಶ ಪ್ರಗತಿಯನ್ನು ಹೊಂದುತ್ತಿರುವುದು ನಿಲ್ಲಬಾರದು. ದೇಶದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕು ಎಂದು ಹೇಳಿರುವ ನಟಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿಗಳನ್ನು ಮೆಚ್ಚಿದ್ದಾರೆ. ನಟಿಯ ಹೇಳಿಕೆಯ ಬೆನ್ನಲ್ಲೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳು ಹರಿದು ಬರುತ್ತಿದೆ.