Lakshmi Nivasa: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ (Lakshmi Nivasa) ಧಾರಾವಾಹಿ ಈಗಾಗಲೇ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದು, ಸದ್ಯಕ್ಕಂತೂ ಈ ಧಾರಾವಾಹಿಯಲ್ಲಿನ ಜಯಂತ್ ಪಾತ್ರದ ಕುರಿತಾಗಿ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮತ್ತು ಸುದ್ದಿಗಳು ಆಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಪಾತ್ರದ ಬಗ್ಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು ಪರ ಮತ್ತು ವಿರೋಧ ಮಾತುಗಳು ಕೇಳಿ ಬರುವ ಮೂಲಕ ಸಿರಿಯಲ್ ನ ಪಾತ್ರವೊಂದರ ಕುರಿತಾಗಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವುದು ಎಲ್ಲರಿಗೂ ಸಹಾ ಅಚ್ಚರಿಯನ್ನ ಮೂಡಿಸಿದೆ.
ಧಾರಾವಾಹಿಯ ಕಥೆಯ ಪ್ರಕಾರ ಜಯಂತ್ ಗೆ (Jayanth) ತನ್ನ ಹೆಂಡತಿ ಜಾಹ್ನವಿ ಅಂದ್ರೆ ಅತಿಯಾದ ಪ್ರೀತಿ, ಕಾಳಜಿ ಹಾಗೂ ಅದೇ ವೇಳೆ ಅತಿಯಾದ ಸಂದೇಹ ಕೂಡಾ ಇದೆ. ಹೆಂಡತಿಯನ್ನು ಮನೆಯಲ್ಲಿ ಕೂಡಿ ಹಾಕಿ ಆಫೀಸ್ ನಲ್ಲಿ ಕೂತ್ಕೊಂಡು ಇಡೀ ದಿನ ಹೆಂಡತಿ ಏನೇನೆಲ್ಲ ಮಾಡ್ತಾಳೆ ಅನ್ನೋದನ್ನ ಸಿಸಿಟಿವಿಯ ಸಹಾಯದಿಂದ ಗಮನಿಸ್ತಾನೇ ಇರ್ತಾನೆ. ಮದುವೆಯ ಮೊದಲ ರಾತ್ರಿಯಲ್ಲೇ ಹೆಂಡತಿ ಮೈಮೇಲೆ ಜಿರಳೆ ಹರಿದಾಡಿತು ಅಂತ ಅದನ್ನ ಹಾಲಲ್ಲಿ ಬೆರೆಸಿಕೊಂಡು ಕುಡಿಯುವ ಮೂಲಕ ದೊಡ್ಡ ಶಾಕ್ ಅನ್ನು ನೀಡಿತ್ತು ಜಯಂತ್ ಪಾತ್ರ.
ಇದಾದ ಮೇಲೆ ಜಾಹ್ನವಿಯ ಕಾಲೇಜಿನ ಒಂದಷ್ಟು ವಿಷಯಗಳನ್ನು ತಿಳ್ಕೊಂಡು ಅವಳಿಗೆ ಇನ್ನೊಂದಷ್ಟು ಶಿಕ್ಷೆಗಳನ್ನು ನೀಡ್ತಾ ಇದ್ದಾನೆ ಜಯಂತ್. ಇಂತಹದೊಂದು ಸೈಕೋ ಬುದ್ದಿಯನ್ನು ನೋಡಿದ ಪ್ರೇಕ್ಷಕರು ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕ್ತಾ ಇದ್ದಾರೆ. ಜಯಂತ್ ಪಾತ್ರ ಸಮಾಜಕ್ಕೆ ಒಂದು ತಪ್ಪು ಸಂದೇಶವನ್ನು ನೀಡ್ತಾ ಇದೆ ಅಂತ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ..
ಜಯಂತ್ ಪಾತ್ರ ಅತಿ ಆಯ್ತು, ದಯವಿಟ್ಟು ಬದಲಾವಣೆ ಮಾಡಿ, ಈ ರೀತಿಯ ಪಾತ್ರವನ್ನು ತೋರಿಸ್ತಾ ಇರೋ ನಿರ್ದೇಶಕರಿಗೆ ಬುದ್ಧಿ ಇಲ್ವಾ ಅಂತ ಕೆಲವರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ನಮ್ಮ ಸಮಾಜದಲ್ಲಿ ಇಂಥ ವ್ಯಕ್ತಿಗಳು ಇದ್ದಾರೆ, ಕೆಲವು ಹೆಣ್ಣು ಮಕ್ಕಳು ತಮ್ಮ ಗಂಡ ಈ ರೀತಿಯವನು ಅಂತ ಹೇಳಿಕೊಳ್ಳಲಾಗದೇ ಒದ್ದಾಡ್ತಿದ್ದಾರೆ ಎನ್ನುವ ಮಾತುಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಜಯಂತ್ ಪಾತ್ರವನ್ನು ನೋಡಿದ ನಂತರ ಹೆಣ್ಣು ಮಕ್ಕಳಿಗೆ ಮದುವೆ ಆಗದಿದ್ದರೂ ಪರವಾಗಿಲ್ಲ ಆದರೆ ಇಂಥ ಗಂಡ ಬೇಡ ಎನ್ನುವಂತೆ ಒಂದಷ್ಟು ಜನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಜಯಂತ್ ಪಾತ್ರದ ಮೂಲಕ ಇಂತಹ ವ್ಯಕ್ತಿತ್ವದ ಕುರಿತಾಗಿ ಒಂದಷ್ಟು ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡ್ತಿರಬಹುದು ಆದ್ರೂ ಈ ಪಾತ್ರದ ಔಚಿತ್ಯ ಈಗ ಚರ್ಚೆಗಳಿಗೆ ಕಾರಣವಾಗಿದೆ. ಇನ್ನೊಂದು ಕಡೆ ಈ ಪಾತ್ರದಲ್ಲಿ ನಟಿಸುತ್ತಿರುವ ನಟ ದೀಪಕ್ ಸುಬ್ರಹ್ಮಣ್ಯ (Deepak Subramanya) ಅವರಿಗೆ ಅವರ ನಟನೆಗೆ ದೊಡ್ಡ ಪ್ರಶಂಸೆ ಸಿಗ್ತಾ ಇದೆ.