Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು ತಮ್ಮದೇ ಆದ ವಿಶೇಷತೆಯಿಂದ ಟ್ರೆಂಡ್ ಸೆಟ್ ಮಾಡಿವೆ. ಅಂತಹ ಸಿನಿಮಾಗಳಲ್ಲಿ ಒಂದು ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಎ ಸಿನಿಮಾ (A Cinema) ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಈಗ ಮತ್ತೊಮ್ಮೆ ಈ ಸಿನಿಮಾ ತೆರೆಯ ಮೇಲೆ ಬರಲು ಸಜ್ಜಾಗಿದೆ. ಈ ವೇಳೆ ಸಿನಿಮಾದ ಒಂದಷ್ಟು ವಿಚಾರಗಳು ಮುನ್ನೆಲೆಗೆ ಬಂದಿವೆ.
ಎ ಸಿನಿಮಾ ಒಂದು ವಿಭಿನ್ನ ಪ್ರಯತ್ನದಂತೆ ಮೂಡಿ ಬಂದು, ದೊಡ್ಡ ಯಶಸ್ಸನ್ನು ಕಂಡಂತಹ ಸಿನಿಮಾ ಆಗಿತ್ತು. ಈ ಸಿನಿಮಾದಲ್ಲಿ ನಟಿ ಚಾಂದಿನಿ ಅವರು ನಾಯಕಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡಿದ್ದರು. ಇಂದಿಗೂ ಕೂಡಾ ಚಾಂದಿನಿ (Chandini) ಅವರನ್ನು ಎ ಸಿನಿಮಾದ ನಟಿಯಾಗಿಯೇ ಗುರುತಿಸುತ್ತಾರೆ ಎಂದರೆ ಆ ಪಾತ್ರದ ಪ್ರಭಾವ ಎಷ್ಟಿತ್ತು ಅನ್ನೋದು ಅರ್ಥವಾಗುತ್ತೆ.
ಈಗ ಸಿನಿಮಾ ಮರು ಬಿಡುಗಡೆ ವೇಳೆಯಲ್ಲಿ ನಟಿ ಚಾಂದಿನಿ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಿನಿಮಾ ಮರು ಬಿಡುಗಡೆ ಆಗುತ್ತಿರುವುದಕ್ಕೆ ನಟಿಯು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಎ ನನ್ನ ಜೀವನವನ್ನು ಬದಲಿಸಿದಂತಹ ಸಿನಿಮಾ. ಈ ಸಿನಿಮಾದ ಜನಪ್ರಿಯ ಡೈಲಾಗ್ God is great ಎನ್ನುವ ಹಾಗೆ ದೇವರ ಆಶೀರ್ವಾದ ಸಹಾ ಸಿಕ್ಕಿದೆ. ನಾನು ಇಂದಿಗೂ ಸಹಾ ಎ ಸಿನಿಮಾದ ಚಾಂದಿನಿ ಹಾಗೇ ಇದ್ದೀನಿ, ಎ ಸಿನಿಮಾ ಎಲ್ಲಾ ಕಾಲಘಟ್ಟವನ್ನ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ ಅಂದಿದ್ದಾರೆ.
ಇದೇ ವೇಳೆ ಚಾಂದಿನಿ ಅವರು ಸಿನಿಮಾದ ನಿರ್ದೇಶಕ ಮತ್ತು ನಾಯಕ ಸಹಾ ಆಗಿರೋ ಉಪೇಂದ್ರ (Upendra) ಅವರ ಕುರಿತಾಗಿ ಮಾತನಾಡಿದ್ದು, ಉಪೇಂದ್ರ ಅವರು ಪ್ರಬುದ್ಧ ನಿರ್ದೇಶಕ. ಅವರ ನಿರ್ದೇಶನ ಬಗ್ಗೆ ವರ್ಣಿಸೋದಕ್ಕೆ ಪದಗಳು ಸಾಲೋದಿಲ್ಲ. ಅಂದಿಗೂ , ಇಂದಿಗೂ ಅವರೇ ನನ್ನ ಅಚ್ಚುಮೆಚ್ಚಿನ ನಿರ್ದೇಶಕ ಅಂತ ಬಹಳ ಖುಷಿಯಿಂದ ಹೇಳಿದ್ದಾರೆ. ಎ ಸಿನಿಮಾ ಮರು ಬಿಡುಗಡೆ ವೇಳೆಯಲ್ಲಿ ನಟಿ ಉತ್ತಮ ಕಥೆ ಸಿಕ್ಕರೆ ನಟಿಸುವುದಾಗಿಯೂ ಹೇಳಿದ್ದಾರೆ.