Amaran : ಕಾಲಿವುಡ್ ನ ಸ್ಟಾರ್ ನಟ ಶಿವ ಕಾರ್ತಿಕೇಯನ್ (Shiva Karthikeyan) ಮತ್ತು ಜನಪ್ರಿಯ ನಟಿ ಸಾಯಿ ಪಲ್ಲವಿ (Sai Pallavi) ಜೋಡಿಯಾಗಿ ನಟಿಸಿರುವ ಅಮರನ್ (Amaran) ಸಿನಿಮಾಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದಿದೆ, ಇದು ಒಂದು ಉತ್ತಮ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಗಳಿಕೆಯ ವಿಚಾರದಲ್ಲೂ ಸಿನಿಮಾ ಬಾಕ್ಸಾಫೀಸಿನಲ್ಲಿ ಸದ್ದನ್ನು ಮಾಡಿದೆ. ಸಿನಿಮಾದ ನಿರ್ಮಾಣ ವೆಚ್ಚ ಕಡಿಮೆಯಾದರೂ ಬಿಡುಗಡೆ ನಂತರ ಜನ ಮೆಚ್ಚುಗೆಯನ್ನು ಪಡೆದುಕೊಂಡ ಈ ಸಿನಿಮಾ ಗಳಿಸಿರುವುದು 300 ಕೋಟಿ ರೂಪಾಯಿಗಳು.
ಈಗ ಹೊಸ ಸುದ್ದಿಯೊಂದು ಹೊರ ಬಂದಿದ್ದು ಚೆನ್ನೈನ ಇಂಜಿನಿಯರಿಂಗ್ ವಿದ್ಯಾರ್ಥಿ ವಿವಿ ವಾಗೀಶನ್ (VV Vagishan) ಸಿನಿಮಾ ನಿರ್ಮಾಪಕರ ಮೇಲೆ ದೂರು ದಾಖಲಿಸಿ ಲಾಯರ್ ನೋಟೀಸ್ ನೀಡಿದ್ದಾರೆ. ಇಷ್ಟಕ್ಕೂ ಆಗಿದ್ದೇನೆಂದರೆ ಸಿನಿಮಾದ ದೃಶ್ಯವೊಂದರಲ್ಲಿ ನಾಯಕ ಮತ್ತು ನಾಯಕಿ ನಡುವೆ ಪ್ರೇಮಾಂಕುರವಾದಾಗ ನಾಯಕಿ ಪೇಪರ್ ನಲ್ಲಿ ಏನೋ ಬರೆದು ನಾಯಕನ ಕಡೆ ಎಸೆಯುತ್ತಾಳೆ. ಅದರಲ್ಲಿ ಫೋನ್ ನಂಬರ್ ಅನ್ನು ಬರೆಯಲಾಗಿರುತ್ತದೆ.
ಈಗ ವಿವಿ ವಾಗೀಶನ್ ಹೇಳುವುದೇನೆಂದರೆ ಅದು ತನ್ನ ಫೋನ್ ನಂಬರ್ ಆಗಿದ್ದು, ಸಿನಿಮಾದಲ್ಲಿ ಆ ದೃಶ್ಯ ನೋಡಿದ ಮೇಲೆ ಅನೇಕರು ವಿಶೇಷವಾಗಿ ಸಾಯಿ ಪಲ್ಲವ ಅಭಿಮಾನಿಗಳು ತನಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದಾರೆ. ನಿರಂತರ ಕಾಲ್ ಗಳಿಂದ ಓದಲು, ನಿದ್ದೆ ಮಾಡಲು ಸಹಾ ಆಗುತ್ತಿಲ್ಲ. ಇದರಿಂದ ಮಾನಸಿಕ ನೆಮ್ಮದಿಯೇ ಹಾಳಾಗಿದೆ ಎಂದು ಚಿತ್ರ ನಿರ್ಮಾಪಕರ ಬಳಿ ಪರಿಹಾರವನ್ನು ಕೇಳಿದ್ದಾನೆ.
ವಾಗೀಶನ್ ಅಮರನ್ ಸಿನಿಮಾ ನಿರ್ಮಾಪಕರು ತನಗೆ 1.1 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದು, ಯಾವುದೇ ಕಾರಣಕ್ಕೂ ನಾನು ಫೋನ್ ನಂಬರನ್ನು ಬದಲಾಯಿಸುವುದಿಲ್ಲ ಎಂದಿದ್ದಾರೆ. ವಾಗೀಶನ್ ಮಾಡಿರುವ ಆರೋಪ ಮತ್ತು ಕೇಳಿರುವ ಪರಿಹಾರ ಧನದ ವಿಚಾರವಾಗಿ ಚಿತ್ರ ತಂಡ ಯಾವ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.