South Actress: ಸಿನಿಮಾರಂಗದಲ್ಲಿ ಹೆಸರನ್ನು ಮಾಡಿರುವ, ದೊಡ್ಡ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಿರುವ ಸ್ಟಾರ್ ನಟರು ರಾಜಕೀಯವನ್ನು ಪ್ರವೇಶಿಸುವುದು ಖಂಡಿತ ಹೊಸ ವಿಚಾರವೇನಲ್ಲ. ತಮಿಳು ನಾಡಿನ ರಾಜಕೀಯವನ್ನು ಗಮನಿಸಿದಾಗ ಈಗಾಗಲೇ ನಟರಾಗಿ ಹೆಸರನ್ನು ಮಾಡಿರುವ ಹಿರಿಯ ನಟ ಕಮಲ ಹಾಸನ್ (Kamal Haasan) ಮತ್ತು ಉದಯನಿಧಿ ಸ್ಟಾಲಿನ್ (Udayanidhi Stalin) ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಕೂಡಾ ತಮಿಳುನಾಡಿನ ರಾಜಕೀಯಕ್ಕೆ ಭರ್ಜರಿಯಾಗಿ ಎಂಟ್ರಿಯನ್ನು ಕೊಟ್ಟಿದ್ದಾರೆ. ತಮಿಳಗ ವೆಟ್ರಿ ಕಳಗಂ ಎನ್ನುವ ಹೆಸರಿನ ತಮ್ಮದೇ ಆದ ಪಕ್ಷವನ್ನು ಪ್ರಾರಂಭ ಮಾಡಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ತಿಳಿಸಿರುವ ದಳಪತಿ ವಿಜಯ್ (Thalapathy Vijay), 2026ರಲ್ಲಿ ನಡೆಯಲಿರುವಂತಹ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಾಗಿ ಹೇಳಿದ್ದಾರೆ. ತಮಿಳುನಾಡಿನಲ್ಲಿ ವಿಜಯ್ ರಾಜಕೀಯ ಪ್ರವೇಶ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ, ರಾಜಕೀಯ ಚಟುವಟಿಕೆಗಳು ಬಹಳ ಜೋರಾಗಿ ನಡೆದಿದೆ. ಇವೆಲ್ಲವುಗಳ ನಡುವೆ ಸ್ಟಾರ್ ನಟಿಯೊಬ್ಬರು ವಿಜಯ್ ಗೆ ಸ್ಪರ್ಧ ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಹೌದು, ದಕ್ಷಿಣದ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಮಿತಾ (Namitha) ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಈ ನಟಿ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ಹೀರೋ ದಳಪತಿ ವಿಜಯ್ ವಿರುದ್ಧ ತಾನು ಚುನಾವಣಾ ಕಣಕ್ಕೆ ಇಳಿಯುವುದಾಗಿ ಕಾಮೆಂಟ್ ಅನ್ನು ಮಾಡಿದ್ದಾರೆ. ನಟಿಯು ಹೇಳಿರುವಂತಹ ವಿಚಾರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗಮನವನ್ನು ಸೆಳೆದಿದೆ.
ನಮಿತಾ ಮಾಡಿರುವಂತಹ ಕಾಮೆಂಟ್ ವೈರಲ್ ಆದ ಬೆನ್ನಲ್ಲೇ ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಕೂಡಾ ಹರಿದು ಬರುತ್ತಿದೆ. ರಾಜಕೀಯದಲ್ಲಿ ಪ್ರಬಲ ಎದುರಾಳಿಯ ವಿರುದ್ಧ ನಿಂತರೆ ಮಾತ್ರವೇ ರಾಜಕೀಯದಲ್ಲಿ ಬೇಗ ಬೆಳೆಯಬಹುದು ಅನ್ನೋದು ನಮಿತಾ ಅವರ ಆಲೋಚನೆ ಎನ್ನಲಾಗಿದೆ. ಅದಕ್ಕಾಗಿ ಅವರು ದಳಪತಿ ವಿಜಯ್ ವಿರುದ್ಧ ಚುನಾವಣಾ ಕಣದಲ್ಲಿ ತೊಡೆ ತಟ್ಟಲು ಸಜ್ಜಾಗುತ್ತಿದ್ದಾರೆ. ನಟಿಯ ಕಾಮೆಂಟ್ಗಳಿಗೆ ವಿಜಯ್ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಾ ಟೀಕೆ ಮಾಡಿದ್ದು, ದಳಪತಿ ವಿರುದ್ಧ ಸ್ಪರ್ಧೆ ಮಾಡಿದರೆ ಠೇವಣಿ ಕೂಡಾ ಸಿಗೋದಿಲ್ಲ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.