Jalebi Baba: ಹಲವು ಮಹಿಳೆಯರ ಮೇಲೆ ಅತ್ಯಾಚಾರವನ್ನು ಮಾಡಿದ್ದು ಮಾತ್ರವಲ್ಲದೇ ಅದನ್ನು ವೀಡಿಯೋ ಮಾಡಿಕೊಂಡಿದ್ದ ಆರೋಪವನ್ನು ಹೊತ್ತುಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ಜಿಲೇಬಿ ಬಾಬಾ (Jalebi Baba) ಎಂದೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಬಾಬಾ ಬಿಲ್ಲೂರಾಮ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಓರ್ವ ಅಪ್ರಪ್ತೆಯನ್ನು ಸೇರಿದಂತೆ ತನ್ನ ಮೂವರು ಮಹಿಳಾ ಶಿಷ್ಯರ ಮೇಲೆ ದೌರ್ಜನ್ಯವನ್ನು ಎಸಗಿದ್ದ ಆರೋಪ ಈತನ ಮೇಲಿತ್ತು. ಈ ಪ್ರಕರಣದಲ್ಲಿ ಬಿಲ್ಲೂ ರಾಮ್ ಬಾಬಾ (Billu Ram Baba) ದೋಷಿ ಎಂದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಹದಿನೆಂಟು ವರ್ಷಗಳ ಜೈಲು ಶಿಕ್ಷೆಯನ್ನು ವೈದಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಈತನನ್ನು ಹರಿಯಾಣದ (Haryana) ಹಿಸ್ಸಾರ್ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಈಗ ಹೃದಯಘಾತದಿಂದ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಬಿಲ್ಲೂ ರಾಮ್ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಅನಾರೋಗ್ಯದ ಕಾರಣ ಹೃದಯಘಾತವಾಗಿದೆ ಎಂದು ಆತನ ಪರ ವಕೀಲ ಗಜೇಂದ್ರ ಪಾಂಡೆ ಮಾಧ್ಯಮಗಳ ಮುಂದೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಂಗಳವಾರ ರಾತ್ರಿಯೇ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಬಿಲ್ಲು ರಾಮನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು.
ಚಿಕಿತ್ಸೆ ಫಲಕಾರಿಯಾಗದ ಕಾರಣ ಆತ ಸಾವನ್ನಪ್ಪಿದ್ದಾನೆ. ಬಿಲ್ಲೂ ರಾಮ್ ಒಬ್ಬ ಸ್ವಯಂ ಘೋಷಿತ ದೇವಮಾನವನಾಗಿದ್ದ. ಈತ ಹರಿಯಾಣದ ಪತೇಹಾಬಾದ್ ಜಿಲ್ಲೆಯಲ್ಲಿ ತಳ್ಳುಗಾಡಿಯಲ್ಲಿ ಜಿಲೇಬಿಯನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಅದೇ ಕಾರಣದಿಂದಲೇ ಜಿಲೇಬಿ ಬಾಬಾ ಎಂದು ಹೆಸರನ್ನ ಪಡೆದುಕೊಂಡಿದ್ದನು. ಈತನ ವಿರುದ್ಧ 120 ಜನ ಮಹಿಳೆಯರ ಮೇಲೆ ಅತ್ಯಾಚಾರವನ್ನು ಮಾಡಿರುವ ಆರೋಪ ಇದೆ. ಅತ್ಯಾಚಾರವೆಸಗಿದ್ದ ದೃಶ್ಯಗಳನ್ನ ವೀಡಿಯೋ ಮಾಡಿಕೊಂಡು ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದನು.
ತನ್ನ ಬಳಿಗೆ ಬರುವ ಮಹಿಳೆಯರಿಗೆ ಚಹಾದಲ್ಲಿ ಮತ್ತು ಬರುವಂತಹ ಔಷಧಿಯನ್ನು ನೀಡಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದನು ಎನ್ನಲಾಗಿದ್ದು, ಈತನ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿತ್ತು. ಪೊಲೀಸರು ಆತನ ಆಶ್ರಮದಲ್ಲಿ ಒಂದಷ್ಟು ಅಶ್ಲೀಲ ಸಿಡಿಗಳನ್ನು ವಶಪಡಿಸಿಕೊಂಡಿದ್ದರು. 2018 ರಲ್ಲಿ ಜಲೇಬಿ ಬಾಬಾ ಬಿಲ್ಲು ರಾಮ್ ನ ವೀಡಿಯೋಗಳು ವೈರಲ್ ಆಗಿ ಜನ ಆಕ್ರೋಶವನ್ನು ಹೊರ ಹಾಕಿದ್ದರು.