Vijay Suriya: ವಿಶ್ವ ಅಮ್ಮಂದಿರ ದಿನದಂದೇ (World Mother’s Day) ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಜನಪ್ರಿಯ ನಟ ವಿಜಯ್ ಸೂರ್ಯ (Vijay Suriya) ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೆ ನಟ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ಯಾಕೆ ಅನ್ನೋ ಅನುಮಾನ ನಿಮಗೆ ಮೂಡಬಹುದು. ಅದಕ್ಕೆ ಒಂದು ವಿಶೇಷವಾದ ಕಾರಣವೂ ಇದೆ. ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಟ ವಿಜಯ್ ಸೂರ್ಯ ಅವರು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಈಗ ನಟ ಮಾಡಿರುವ ಕೆಲಸವನ್ನು ನೀಡಿ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. ಇದೇ ವೇಳೆ ಸೆಲೆಬ್ರಿಟಿ ಆದ ಕಾರಣ ನಟನ ಈ ನಡೆ ಒಂದಷ್ಟು ಜನರಿಗೆ ಸ್ಪೂರ್ತಿ ಆಗುತ್ತೆ ಅನ್ನೋದ್ರಲ್ಲಿ ಖಂಡಿತ ಅನುಮಾನವಿಲ್ಲ. ಹಾಗಾದರೆ ನಟ ತಮ್ಮ ಹೆಸರನ್ನು ಏನಂತ ಬದಲಿಸಿಕೊಂಡಿದ್ದಾರೆ ಅನ್ನೋದನ್ನ ತಿಳಿಯೋಣ ಬನ್ನಿ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಟ ವಿಜಯ್ ಸೂರ್ಯ ಅವರು ತಮ್ಮ ಹೆಸರಿನ ಬದಲಾವಣೆಯ ವಿಚಾರವನ್ನು ತಿಳಿಸಿದ್ದು, ವಿಶ್ವ ಅಮ್ಮಂದಿರ ದಿನವೇ ತಮ್ಮ ಹೆಸರಿನಲ್ಲಿ ತಮ್ಮ ತಾಯಿಯ ಹೆಸರನ್ನ ಸೇರಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಮ್ಮನಿಗೆ ತಾಯಂದಿರ ದಿನದಂದೇ ವಿಶೇಷವಾದ ಗೌರವವನ್ನು ನೀಡಿದ್ದಾರೆ ನಟ ವಿಜಯ ಸೂರ್ಯ.
ನಟ ಫೋಟೋ ಒಂದನ್ನು ಶೇರ್ ಮಾಡಿಕೊಂಡು,
ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ,
ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ.. ಎಂ ಆರ್ ಕಮಲಾ ಅವರು ಬರೆದ ಈ ಸಾಲನ್ನು ಮನದಲ್ಲಿ ನೆನೆಯುತ್ತಾ ಅಮ್ಮನಿಗೊಂದು ಭಾವುಕ ನಮನ ಸಲ್ಲಿಸುತ್ತೇನೆ. Happy Mother’s Day Amma.
ಇಷ್ಟು ಹೇಳಿದರೆ ಸಾಕಾ ? ಅಮ್ಮ ಪ್ರತಿ ಕ್ಷಣದ ಮಿಡಿತ ಅಲ್ವಾ? ಈ ಪ್ರಶ್ನೆ ನನ್ನನ್ನು ಸದಾ ಕಾಡಿದೆ ಇದಕ್ಕೆ ಉತ್ತರ ಹುಡುಕಲು ಹೊರಟಾಗ ಅನ್ನಿಸಿದ್ದು ನನ್ನ ಹೆಸರಿನಲ್ಲಿ ಅಮ್ಮನ ಹೆಸರು ಬೆರೆತರೆ ಹೇಗೆ ಎಂಬ ಭಾವ. ಅದನ್ನು ಅಳವಡಿಸಿಕೊಳ್ಳಲು ಅಮ್ಮಂದಿರ ದಿನಕ್ಕಿಂತ ವಿಶೇಷ ಸಂದರ್ಭ ಯಾವುದಿದೆ ಅಲ್ವಾ? ಎಂದು ಸುಂದರ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಅದರ ಜೊತೆಗೆ ಹೌದು ಇಂದಿನಿಂದ ನಾನು ನನ್ನ ಹೆಸರನ್ನು ವಿಜಯ್ ಲಲಿತಾ ಸೂರ್ಯ (Vijay Lalita Suriya) ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು.ನನ್ನ ಪಾಲಿನ ಉಸಿರು. ಜಗತ್ತಿನ ಎಲ್ಲ ಅಮ್ಮಂದಿರಿಗೂ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ, ಈ ಮೂಲಕ ತನ್ನ ಹೆಸರನ್ನು ಬದಲಿಸಿಕೊಂಡಿದ್ದನ್ನು ತಿಳಿಸಿದ್ದಾರೆ.