Raja Rani Show: ಕಿರುತೆರೆಯಲ್ಲಿ ರಾಜಾ ರಾಣಿ ಕಾರ್ಯಕ್ರಮದ (Raja Rani Show) ಮತ್ತೊಂದು ಹೊಸ ಸೀಸನ್ ಆರಂಭವಾಗಿದೆ. ಒಂದಷ್ಟು ಹೊಸ ಜೋಡಿಗಳು, ಪರಿಚಿತ ಸೆಲೆಬ್ರಿಟಿ ಜೋಡಿಗಳು, ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರೋ ಜೋಡಿ ಹೀಗೆ ವೈವಿದ್ಯಮಯ ಜೋಡಿಗಳು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿವೆ. ಇದರಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಮೂಲಕ ಜನಪ್ರಿಯತೆ ಪಡೆದಿರುವ ಗೋವಿಂದರಾಜ್ ದಂಪತಿ ಅಂದರೆ ಕರ್ನಾಟಕ ಜೋಡಿ ಸಹಾ ಒಂದಾಗಿದೆ.
ರಾಜಾರಾಣಿ ಸೀಸನ್ 3 ರಲ್ಲಿ ಗೋವಿಂದರಾಜ್ (Govinda Raj) ಮತ್ತು ವೈಲಾ (Vaila) ದಂಪತಿ ಭಾಗಿಯಾಗಿದ್ದಾರೆ. ರೀಲ್ಸ್ ವೀಡಿಯೋಗಳ ಮೂಲಕ ಹೆಸರಾದ ಜೋಡಿ ಇವರು. ಗೋವಿಂದ ರಾಜ್ ಅವರಿಗೆ ವೈಲಾರನ್ನು ಮೊದಲ ಸಲ ನೋಡಿದಾಗಲೇ ಅವರ ಮೇಲೆ ಪ್ರೀತಿ ಮೂಡಿತ್ತಂತೆ. ವೈಲಾನ ಮದುವೆ ಆಗ್ತೀಯಾ ಅಂತ ಕೇಳಿದಾಗ ಒಪ್ಪಲಿಲ್ಲವಂತೆ. ವೈಲಾರನ್ನ ಮದುವೆಗೆ ಒಪ್ಪಿಸಲು ಗೋವಿಂದರಾಜ್ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ.
ವೈಲಾ ಬರುವ ದಾರಿಯಲ್ಲಿ ಇರುತ್ತಿದ್ದ ಗೋವಿಂದರಾಜ್ ಬ್ಲೇಡಿನಿಂದ ಕೈ ಕೊಯ್ದುಕೊಂಡರೂ ವೈಲಾ ಸೊಪ್ಪು ಹಾಕಲಿಲ್ಲವಂತೆ. ಸ್ನೇಹಿತನಿಗೆ ಮೊದಲೇ ಆಟೋ ತರಲು ಹೇಳಿದ್ದ ಗೋವಿಂದರಾಜ್ ನಿಂತಿದ್ದ ಆಟೋ ಒಳಗೆ ವೈಲಾರನ್ನ ತಳ್ಳಿ ಎತ್ತಾಕೊಂಡು ಹೋಗಿ ಅರಿಶಿನಕೊಂಬಿನ ದಾರ ಕಟ್ಟಿ ಮದುವೆ ಮಾಡಿಕೊಂಡಿದ್ದರಂತೆ.
ಮದುವೆ ಆದ ಮೇಲೂ ವೈಲಾ ಸಾಕಷ್ಟು ಸಲ ಓಡಿ ಹೋಗೋ ಪ್ರಯತ್ನ ಮಾಡಿದರೂ ಗೋವಿಂದರಾಜ್ ರಿಂದ ತಪ್ಪಿಸಿಕೊಳ್ಳೋಕೆ ಆಗಲಿಲ್ಲವಂತೆ. ತಂದೆ ತಾಯಿ ಹಾಗೂ ತಮ್ಮವರನ್ನು ಕಳೆದುಕೊಂಡ ವೈಲಾಗೆ ಇಂದು ಗೋವಿಂದರಾಜ್ ಅವರೇ ಜಗತ್ತು. ಈ ಜೋಡಿ ಮದುವೆಯಾಗಿ 26 ವರ್ಷಗಳು ಕಳೆದಿವೆ. ಈಗ ರಾಜಾ ರಾಣಿ ಶೋ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ಈ ಜೋಡಿ ಜನರ ಮನಸ್ಸನ್ನು ಗೆಲ್ಲುತ್ತಾರಾ? ಕಾದು ನೋಡಬೇಕಾಗಿದೆ.