Dasara Elephants ದಸರಾ ಗಜಪಡೆಗೆ (Dasara Elephants) ವಿಶೇಷವಾದ ಮಹತ್ವ ಹಾಗೂ ಪ್ರಾಮುಖ್ಯತೆ ಇದೆ. ಆದರೆ ಈಗ ಸಾಂಸ್ಕೃತಿಕ ನಗರ ಮೈಸೂರಲ್ಲಿ (Mysuru Dasara) ಕೆಲವರು ತಮ್ಮ ರೀಲ್ಸ್ ಹುಚ್ಚಿಗೆ ಆನೆಗಳನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಮೈಸೂರಿನ ಅರಮನೆಗೆ ಪ್ರತಿದಿನ ಭೇಟಿ ನೀಡುವ ಅನಾಮಿಕರು ಆನೆಗಳ ಜೊತೆಗೆ ರೀಲ್ಸ್ ಅನ್ನು ಮಾಡಲು ಮುಂದಾಗಿದ್ದಾರೆ.
ಮೈಸೂರಿನ ಅರಮನೆ ಆವರಣದಲ್ಲಿ ಆನೆಗಳ ದಂತಗಳನ್ನು, ಸೊಂಡಿಲನ್ನ ಹಿಡಿದು ರೀಲ್ಸ್ (Reels) ಮಾಡುತ್ತಿದ್ದಾರೆ. ಆನೆಗಳ ಮುಂದೆ ಫೋಟೋ ಶೂಟ್ ಮಾಡಲು ಅರಣ್ಯ ಅಧಿಕಾರಿಗಳು ಅನುಮತಿ ನೀಡಿರುವುದು ಆನೆಗಳ ವಿಚಾರದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತಿದೆ.
ಮೊನ್ನೆಯಷ್ಟೆ ಗಜಪಡೆಯ ಎರಡು ಆನೆಗಳ ನಡುವೆ ನಡೆದ ಕಾಳಗ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಈ ಹಿಂದೆ ಹೀಗೆ ಆನೆಗಳ ಮುಂದೆ ಫೋಟೋ ತೆಗೆದು ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದವು.
ಈಗ ದಿನ ನಿತ್ಯ ಅರಮನೆ ಆವರಣದಲ್ಲಿ ಜನರು ರೀಲ್ಸ್ ಹುಚ್ಚಿನಿಂದ ಆನೆಗಳ ಜೊತೆಗೆ ರೀಲ್ಸ್ ಮಾಡುವುದು ಹೆಚ್ಚಿದ್ದು, ರೀಲ್ಸ್ ಹೆಸರಿನಲ್ಲಿ ಈಗ ಅರಣ್ಯ ಅಧಿಕಾರಿಗಳು ದುಡ್ಡು ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನುವ ಮಾತುಗಳು ಸಹಾ ಕೇಳಿ ಬರುತ್ತಿದೆ.