Jr. NTR : ಭಾರೀ ಪ್ರವಾಹದ ಪರಿಣಾಮವಾಗಿ ದಕ್ಷಿಣದ ರಾಜ್ಯಗಳಾದ ತೆಲಂಗಾಣ (Telangana) ಮತ್ತು ಆಂಧ್ರಪ್ರದೇಶ (Andhra Pradesh) ಎರಡೂ ಸಹಾ ಸಂಕಷ್ಟಕ್ಕೆ ಸಿಲುಕಿವೆ. ರಣ ಮಳೆಯ ಪರಿಣಾಮದಿಂದ 31 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದಿಂದಾಗಿ ಸಾಕಷ್ಟು ರೈಲು ಸೇವೆಗಳು ರದ್ದಾಗಿವೆ. ಸರ್ಕಾರದ ಕಡೆಯಿಂದ ಪರಿಹಾರ ಕಾರ್ಯಾಚರಣೆಗಳು ಬಹಳ ವೇಗದಿಂದ ನಡೆಯುತ್ತಿದೆ.
ತೆಲುಗು ರಾಜ್ಯಗಳ ಪ್ರವಾಹದಿಂದ ಆದ ಅನಾಹುತ ಕಂಡು ಮನನೊಂದ ನಟ ಜೂ. ಎನ್ ಟಿ ಆರ್ (Jr. NTR) ಅವರು ಒಂದು ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಸಮಸ್ಯೆ ಎಂದು ತಿಳಿದ ಕೂಡಲೇ ನಟ ಪರಿಹಾರ ನೀಡಲು ಮುಂದಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಈ ವಿಚಾರವಾಗಿ ಜೂ. ಎನ್ ಟಿ ಆರ್ ಅವರು ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಭಾರೀ ಮಳೆಯಿಂದಾಗಿ ಎರಡು ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ನಾನು ತೀವ್ರವಾಗಿ ಮನನೊಂದಿದ್ದೇನೆ. ಈ ದುರಂತದಿಂದ ತೆಲುಗು ಜನರು ಬೇಗ ಚೇತರಿಸಿಕೊಳ್ಳಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ನನ್ನ ಕಡೆಯಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ತೆಲುಗು ರಾಜ್ಯಗಳ ಸರ್ಕಾರಗಳು ಪ್ರವಾಹ ವಿಕೋಪದಿಂದ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳಿಗೆ ಸಹಾಯ ಮಾಡಲು ತಲಾ 50 ಲಕ್ಷ ದೇಣಿಗೆಯನ್ನು ಘೋಷಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.