Pradeep Eshwar : ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆದಾಗ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಚಿವರಾಗಿದ್ದಂತಹ ಡಾ.ಕೆ. ಸುಧಾಕರ್ ಅವರನ್ನು ಸೋಲಿಸಿದ್ದ ಪ್ರದೀಪ್ ಈಶ್ವರ್ (Pradeep Eshwar) ಅಚ್ಚರಿಯನ್ನು ಮೂಡಿಸಿದ್ದರು. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಡಾ. ಕೆ. ಸುಧಾಕರ್ (Dr.K.Sudhakar) ಅವರೇನಾದರೂ ಗೆದ್ದರೆ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲನ್ನು ಹಾಕಿದ್ದರು ಪ್ರದೀಪ್ ಈಶ್ವರ್. ಈಗ ಅವರು ರಾಜೀನಾಮೆ ನೀಡಿದ್ದಾರೆನ್ನುವ ಪತ್ರವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು, ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಡಾ.ಕೆ. ಸುಧಾಕರ್ ಅವರು ಒಂದೇ ಒಂದು ಮತ ಲೀಡ್ ತೆಗೆದುಕೊಂಡರೂ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಮಾದ್ಯಮಗಳ ಮುಂದೆ, ಭಾಷಣಗಳಲ್ಲಿ ಪ್ರದೀಪ್ ಈಶ್ವರ್ ಅವರು ಮಾತನಾಡಿದ್ದು, ಭೋಗ ನಂದೀಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡೋದಾಗಿ ಹೇಳಿದ್ದರು. ಸವಾಲು ಸ್ವೀಕರಿಸೋದಾದರೆ ಸುಧಾಕರ್ ಅವರು ಒಂದು ಪ್ರಮಾಣ ಮಾಡಲಿ ಎಂದಿದ್ದರು.
ನಿನ್ನೆ ಲೋಕಸಭಾ ಚುನಾವಣಾ ಫಲಿತಾಂಶ ಬಂದಾಗಿದೆ, ಡಾ.ಕೆ.ಸುಧಾಕರ್ ಅವರು ಗೆಲುವಿನ ಪತಾಕೆ ಹಾರಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ ಸವಾಲು ಹಾಕಿದ್ದ ವೀಡಿಯೋ ಮತ್ತೆ ವೈರಲ್ ಆಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಹಾ ಕೆಲವೇ ಕ್ಷಣಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ ಕೊಡ್ತಾರೆ ಎಂದು ಪೋಸ್ಟ್ ಶೇರ್ ಮಾಡಿದ್ದರು. ಇವೆಲ್ಲವುಗಳ ಬೆನ್ನಲ್ಲೇ ಪ್ರದೀಪ್ ಈಶ್ವರ್ ರಾಜೀನಾಮೆ ಮಾಡಿದ್ದಾರೆಂಬ ಪತ್ರ ವೈರಲ್ ಆಗ್ತಿದೆ.
ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರದೀಪ್ ಈಶ್ವರ್ ಅವರು ಇದೆಲ್ಲಾ ಯಾರೋ ಕಿಡಿಗೇಡಿಗಳು ಮಾಡಿರೋ ಫೇಕ್ ಲೆಟರ್. ಅಂತಹ ಯಾವುದೇ ರಾಜೀನಾಮೆ ಪತ್ರವನ್ನು ನಾನು ಕೊಟ್ಟಿಲ್ಲ ಎಂಬುದಾಗಿ ಮಾದ್ಯಮವೊಂದರ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಚುನಾವಣಾ ಫಲಿತಾಂಶದ ಬಳಿಕ ನನಗೆ ಬೆದರಿಕೆ ಕರೆಗಳು ಬರುತ್ತಿವೆ, ಎಲ್ಲವನ್ನು ಪೊಲೀಸರ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದ್ದಾರೆ.