Pranitha Subhash: ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ (Sam Pitroda) ಇತ್ತೀಚಿನ ದಿನಗಳಲ್ಲಿ ತಾವು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇವರು ನೀಡುವ ಹೇಳಿಕೆಗಳಿಗೆ ದೇಶ ವ್ಯಾಪಿಯಾಗಿ ಆಕ್ರೋಶ ಮತ್ತು ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವೇ ದಿನಗಳ ಹಿಂದೆಯಷ್ಟೇ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆಯನ್ನು ವಿಧಿಸುವ ಪದ್ಧತಿಯನ್ನು ಭಾರತದಲ್ಲಿ ಜಾರಿ ಮಾಡಬೇಕು ಎನ್ನುವ ಮಾತುಗಳನ್ನು ಹೇಳುವ ಮೂಲಕ ರಾಷ್ಟ್ರ ವ್ಯಾಪಿಯಾಗಿ ಟೀಕೆಗೆ ಗುರಿಯಾಗಿದ್ದರು, ಅವರ ಮಾತನ್ನು ಅನೇಕರು ವಿರೋಧಿಸಿದ್ದರು. ಆ ವಿಷಯ ತಣ್ಣಗಾಗುವ ಮೊದಲೇ ಮತ್ತೊಮ್ಮೆ ಹೊಸದೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ಸ್ಯಾಮ್ ಪಿತ್ರೋಡಾ ಭಾರತ ಪ್ರಜಾಪ್ರಭುತ್ವ (Indian Democracy) ರಾಷ್ಟ್ರ ಎನ್ನುವ ವಿಚಾರವಾಗಿ ಹೇಳಿಕೆಯನ್ನು ನೀಡುತ್ತಾ ಆಡಿರುವ ಮಾತುಗಳು ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಅವರು ತಮ್ಮ ಮಾತುಗಳಲ್ಲಿ, ಭಾರತೀಯರು ಕಳೆದ 75 ವರ್ಷಗಳಿಂದಲೂ ತಮ್ಮಲ್ಲಿರುವ ವೈವಿಧ್ಯತೆಗಳ ನಡುವೆಯೂ ಬಹಳ ಸಂತೋಷದಿಂದ ಜೀವಿಸುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಗಲಭೆಗಳು ನಡೆದಿದ್ದರೂ ಕೂಡಾ ಅಷ್ಟೇ ಬೇಗ ಅದೆಲ್ಲವನ್ನು ಮರೆತು ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ.
ಭಾರತದ ಪೂರ್ವ ಭಾಗದಲ್ಲಿರುವವರು ಚೀನಾದವರಂತೆ ಕಾಣುತ್ತಾರೆ, ಉತ್ತರ ಭಾರತೀಯರು ಬಿಳಿಯ ಚರ್ಮವನ್ನು ಹೊಂದಿರುವವರಾಗಿದ್ದಾರೆ, ಪಶ್ಚಿಮ ಭಾಗದವರು ಅರಬ್ಬರ ಹಾಗೆ ಕಂಡರೆ ದಕ್ಷಿಣ ಭಾರತೀಯರು ಆಫ್ರಿಕನ್ನರ (Africans) ತರ ಕಾಣುತ್ತಾರೆ. ತಮ್ಮ ಬಣ್ಣ, ಸಂಸ್ಕೃತಿ ಹೀಗೆ ಹಲವು ವಿಚಾರಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿದ್ದರೂ ಭಾರತೀಯರೆಲ್ಲರೂ ಸಂತೋಷವಾಗಿ ಜೀವನ ನಡೆಸುತ್ತಿದ್ದು ವೈವಿಧ್ಯತೆಗಳ ನಡುವೆ ಒಗ್ಗಟ್ಟಾಗಿ ಜೀವನ ಸಾಗಿಸುತ್ತಿರುವುದು ಭಾರತೀಯರ ಹೆಗ್ಗಳಿಕೆ ಎಂದಿದ್ದಾರೆ.
ಹೀಗೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾ ಭಾರತೀಯರನ್ನ ಚೀನಿಯರಿಗೆ, ಅರಬ್ಬರಿಗೆ ಹಾಗೂ ಆಫ್ರಿಕನ್ನ ರಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳಷ್ಟು ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈಗ ಇದೇ ವಿಚಾರಕ್ಕೆ ದಕ್ಷಿಣ ಸಿನಿಮಾ ರಂಗದ ಪ್ರಖ್ಯಾತ ನಟಿ ಪ್ರಣಿತ ಸುಭಾಷ್ (Pranitha Subhash) ಅವರು ಸೋಶಿಯಲ್ ಮಖಡಿಯಾ ಮೂಲಕ ಪ್ರತಿಕ್ರಿಯೆ ನೀಡುತ್ತಾ ಪಿತ್ರೋಡಾಗೆ ಗಟ್ಟಿ ತಿರುಗೇಟನ್ನು ನೀಡಿದ್ದಾರೆ.
“ನಾನು ದಕ್ಷಿಣ ಭಾರತದವಳು, ನಾನು ಭಾರತೀಯಳಂತೆ ಕಾಣುತ್ತೇನೆ” ಎಂದು ಪಿತ್ರೊಡಾಗೆ ನಟಿ ಟ್ಯಾಗ್ ಮಾಡಿದ್ದಾರೆ. ನಟಿಯು ಶೇರ್ ಮಾಡಿದ ಪೋಸ್ಟ್ ವೈರಲ್ ಆಗಿದೆ. ನಟಿಯ ಹೇಳಿಕೆಗೆ ಬಹಳಷ್ಟು ಜನ ನೆಟ್ಟಿಗರು ಮೆಚ್ಚುಗೆಗಳನ್ನು ನೀಡಿದ್ದಾರೆ. ನಟಿ ಪ್ರಣೀತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪ್ರಸ್ತುತ ವಿದ್ಯಮಾನಗಳು ಮತ್ತು ಬೆಳವಣಿಗೆಗಳ ಕುರಿತಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.