Yuva Sridevi Divorce : ಸೆಲೆಬ್ರಿಟಿಗಳ ಜೀವನದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಅನ್ನೋದು ತೀರಾ ಸಾಮಾನ್ಯ ಆಗಿದೆ. ಮೊನ್ನೆ ಮೊನ್ನೆಯಷ್ಟೇ ಚಂದನ್ ಗೌಡ ಮತ್ತು ನಿವೇದಿತಾ ಗೌಡ ವಿಚ್ಚೇದನ ವಿಚಾರವು ಎಲ್ಲೆಡೆ ವೈರಲ್ ಆಗಿರುವಾಗಲೇ, ಚರ್ಚೆಗಳು ನಡೆಯುವಾಗಲೇ ಇದೀಗ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಸುದ್ದಿ ಸಂಚಲನ ಸೃಷ್ಟಿಸಿದ್ದು, ಕನ್ನಡಿಗರಿಗೆ ಈ ವಿಚಾರ ದೊಡ್ಡ ಶಾಕ್ ಅನ್ನು ನೀಡಿದೆ. ಎಲ್ಲೆಲ್ಲೂ ಈಗ ಇದೇ ಸುದ್ದಿ ಹರಿದಾಡುತ್ತಿದೆ.
ಹೌದು, ದೊಡ್ಮನೆ ಕುಡಿಯಾದ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ಬೈರಪ್ಪ (Yuva Sridevi Divorce) ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ಇವರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು, ಈಗಾಗಲೇ ಇಬ್ಭರೂ ಬೇರೆ ಬೇರೆಯಾಗಿದ್ದು, ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆನ್ನುವ ವಿಷಯ ಎಲ್ಲರಿಗೂ ಶಾಕ್ ನೀಡಿದೆ. ರಾಘವೇಂದ್ರ ರಾಜ್ಕುಮಾರ್ ಅವರ ಮಗನಾಗಿರುವ ಯುವ ರಾಜ್ಕುಮಾರ್ ಅವರು ಶ್ರೀದೇವಿ ಬೈರಪ್ಪನವರ ಜೊತೆಗೆ ಪ್ರೇಮ ವಿವಾಹವಾಗಿದ್ದರು.
ಮೊದಲು ಸ್ನೇಹಿತರಾಗಿದ್ದ ಇವರು ಅನಂತರ ಪ್ರೀತಿಸಿ ಎರಡು ಕುಟುಂಬಗಳ ಒಪ್ಪಿಗೆಯನ್ನು ಪಡೆದುಕೊಂಡು ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಈಗ ಇಬ್ಬರೂ ಅಧಿಕೃತವಾಗಿ ವಿಚ್ಚೇದನ ಪಡೆಯಲು ನಿರ್ಧಾರ ಮಾಡಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಶ್ರೀದೇವಿ ಬೈರಪ್ಪ ಅವರು ಕಳೆದ ಆರು ತಿಂಗಳಿನಿಂದಲೂ ದೊಡ್ಮನೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
ಶ್ರೀದೇವಿ ಅವರು ರಾಜ್ ಅಕಾಡೆಮಿಯ ರೂವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವ ಮತ್ತು ಶ್ರೀದೇವಿ ನಡುವೆ ಕಳೆದ ಒಂದು ವರ್ಷದಿಂದಲೂ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ದಂಪತಿ ನಡುವಿನ ಕಲಹವನ್ನು ಪರಿಹರಿಸಲು ಎರಡೂ ಕುಟುಂಬಗಳು ಸಹಾ ಪ್ರಯತ್ನವನ್ನು ಮಾಡಿದೆ ಎನ್ನಲಾಗಿದೆ. ಆದರೂ ಅದು ಪರಿಹಾರವಾಗದೇ ಈಗ ವಿಚ್ಚೇದನದ ಹಂತಕ್ಕೆ ಬಂದು ತಲುಪಿದೆ ಎನ್ನಲಾಗಿದೆ.