Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ ಹನ್ನೊಂದಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯನ್ನು ನೀಡಿದ್ದ ನಟಿ ಶೋಭಾ ಶೆಟ್ಟಿ (Shobha Shetty) ಅವರು ಸ್ವಇಚ್ಛೆಯಿಂದ ಮನವಿ ಮಾಡಿಕೊಂಡು ಬಿಗ್ ಬಾಸ್ (BBK 11) ಮನೆಯಿಂದ ಹೊರಗೆ ಬಂದಾಗಿದೆ. ವೀಕೆಂಡ್ ಎಪಿಸೋಡ್ ನಲ್ಲಿ ಜನರ ಓಟು ಪಡೆದು ಸೇವ್ ಆದ್ರೂ ಕೂಡಾ ತನಗೆ ಆಡೋಕೆ ಸಾಧ್ಯ ಇಲ್ಲ ಎಂದು ಹೇಳಿದ ಶೋಭಾ ಅವರ ಮಾತಿಗೆ ಕಿಚ್ಚ ಸುದೀಪ್ ಅವರು ಸಹಾ ಬಹಳ ಸಿಟ್ಟಾಗಿದ್ದರು.
ತಮ್ಮ ಈ ಅನಿರೀಕ್ಷಿತ ನಿರ್ಧಾರಕ್ಕೆ ಶೋಭಾ ಅವರು ಒಂದು ಸುದೀರ್ಘ ಪೋಸ್ಟ್ ಶೇರ್ ಮಾಡಿಕೊಂಡು, ಅದಕ್ಕೆ ಕಲರ್ಸ್ ಕನ್ನಡ ಮತ್ತು ಕಿಚ್ಚ ಸುದೀಪ್ ಅವರನ್ನು ಟ್ಯಾಗ್ ಮಾಡಿದ್ದಾರೆ. ನಟಿಯ ಪೋಸ್ಟ್ ನಲ್ಲಿ ಏನಿದೆ ಎನ್ನುವುದಾದರೆ, ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ.
ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ.. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಾಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ! ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ.
ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯಾ ಶೋಭಾ ಶೆಟ್ಟಿ ಎಂದು ಸುದೀರ್ಘ ಪತ್ರ ಬರೆದಿದ್ದಾರೆ.