Om Parvat : ದೇವಭೂಮಿ ಉತ್ತರಾಖಂಡದಲ್ಲಿನ (Uttarakhand) ಪ್ರಸಿದ್ಧ ಪ್ರವಾಸಿ ತಾಣವಾದ ಓಂ ಪರ್ವತದ (Om Parvat) ಮೇಲೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಮವೆಲ್ಲಾ ಕಣ್ಮರೆಯಾಗಿದ್ದು, ಇದು ಎಲ್ಲರಿಗೂ ಸಹಾ ಅಚ್ಚರಿಯ ಜೊತೆ ಜೊತೆಗೆ ದೊಡ್ಡ ಶಾಕ್ ಸಹಾ ನೀಡುತ್ತಿದೆ. ಹೌದು, ಪಿತ್ತೋರ್ ಘಡದ ಓಂ ಪರ್ವತ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಈಗ ಓಂ ಪರ್ವತದ ಮೇಲಿನ ಹಿಮ ಕಾಣೆಯಾಗಿರುವುದು ಆತಂಕ ಹುಟ್ಟಿಸಿದೆ.
ಹವಾಮಾನ ತಜ್ಞರು ಇದಕ್ಕೆ ಕಾರಣಗಳನ್ನು ನೀಡಿದ್ದು, ಮಳೆಯ ಕೊರತೆಯಿಂದ ಚದುರಿದ ಹಿಮಪಾತ, ವಾಹನ ಮಾಲಿನ್ಯದ ಹೆಚ್ಚಳ ಮತ್ತು ಜಾಗತಿಕ ತಾಪಮಾನ ಏರಿಕೆಯೇ (Global Warming) ಹೀಗೆ ಹಿಮ ಕರಗಲು ಕಾರಣವಾಗಿದೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಪರ್ವತದ ಮೇಲೆ ಹಿಮ ಬಿದ್ದಿಲ್ಲ ಎನ್ನುವುದು ಚರ್ಚೆಯ ವಿಷಯವಾಗಿ ಬದಲಾಗಿದೆ.
ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲಿದ್ದು, ಇದು ಅಲ್ಲಿನ ಪ್ರವಾಸೋದ್ಯಮದ ಮೇಲೆ ಭಾರೀ ಪರಿಣಾಮವನ್ನು ಬೀರಲಿದೆ ಎಂದು ಸಹಾ ಹೇಳಲಾಗುತ್ತಿದ್ದು, ಇದೇ ಸಮಯದಲ್ಲಿ ಏರುತ್ತಿರುವ ಜಾಗತಿಕ ತಾಪಮಾನದ ಕಡೆ ಗಮನ ನೀಡಲು ಇದು ಎಚ್ಚರಿಕೆಯ ಗಂಟೆಯಾಗಿದೆ.
ಸಮುದ್ರಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿ ಇರುವ ಈ ಪರ್ವತದ ಮೇಲೆ ಹಿಮ ಬಿದ್ದಾಗ ಅದು ಓಂ ಅಕ್ಷರದಂತೆ ಕಾಣುತ್ತಿತ್ತು. ಆ ವಿಸ್ಮಯವನ್ನು ನೋಡಲು ಅಸಂಖ್ಯಾತ ಪ್ರವಾಸಿಗರು ಅಲ್ಲಿಗೆ ಹೋಗುತ್ತಿದ್ದರು. ಆದರೆ ಈಗ ಅಲ್ಲಿಗೆ ಹೋದವರಿಗೆ ನಿರಾಶೆಯು ಎದುರಾಗಿದ್ದು, ಬೇಸರದಿಂದ ಮರಳಿ ಬರುವಂತಾಗಿದೆ.