Rave Party: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ (Electronic City) ಜಿ ಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದಂತಹ ರೇವ್ ಪಾರ್ಟಿಯ (Rave Party) ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು (CCB police) ಧಾಳಿಯನ್ನು ಮಾಡಿದ ವೇಳೆಯಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪಾರ್ಟಿಯಲ್ಲಿ ತೆಲುಗಿನ ನಟಿಯರು, ಮಾಡೆಲ್ ಗಳು ಭಾಗಿಯಾಗಿದ್ದರು ಎನ್ನುವ ವಿಚಾರಗಳು ವರದಿಯಾಗಿದ್ದು, ಸಿನಿಮಾ ತಾರೆಯರನ್ನು ಒಳಗೊಂಡ ರೇವ್ ಪಾರ್ಟಿ ಇದೀಗ ಮತ್ತೊಮ್ಮೆ ದೊಡ್ಡ ಸುದ್ದಿಯಾಗಿದೆ ಮತ್ತು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.
ಬೆಳಗಿನ ಜಾವ 3:00ಗೆ ಸಮಯದಲ್ಲಿ ಸಿಸಿಬಿ ಪೊಲೀಸರು ದಾಳಿಯನ್ನು ನಡೆಸಿದ್ದು, ಎಂಡಿಎಂಎ ಮಾತ್ರೆಗಳು, ಕೊಕೈನ್ ಗಳನ್ನ ಪಶುಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪಾರ್ಟಿಯನ್ನು ಹೈದರಾಬಾದ್ (Hyderabad) ಮೂಲಕ ವಾಸು ಎನ್ನುವವರು ಜಿ ಆರ್ ಫಾರ್ಮಲ್ಲಿ ಆಯೋಜನೆ ಮಾಡಿದ್ದರು ಎನ್ನಲಾಗಿದೆ. ಪಾರ್ಟಿಗೆ ಸನ್ಸೆಟ್ ಟು ಸನ್ ರೈಸ್ ಎನ್ನುವ ಹೆಸರನ್ನ ನೀಡಲಾಗಿತ್ತು. ಈ ರೇವ್ ಪಾರ್ಟಿಯಲ್ಲಿ ಹೈದರಾಬಾದ್ ಮತ್ತು ಬೆಂಗಳೂರಿನ ನೂರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರೆನ್ನಲಾಗಿದೆ.
ತೆಲುಗು ನಟಿಯರು, ಸೀರಿಯಲ್ ಗಳಲ್ಲಿ ನಟಿಸುವ ನಟಿಯರು, ಮಾಡೆಲ್ ಗಳು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು ಪಾರ್ಟಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಜನ ಯುವತಿಯರು ಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಈ ಪಾರ್ಟಿಯಲ್ಲಿ ಮಾಡೆಲ್ ಗಳು, ಟೆಕ್ಕಿಗಳು ಕೂಡಾ ಭಾಗವಹಿಸಿದ್ದಾರೆ. ಮಾಹಿತಿಗಳ ಪ್ರಕಾರ ನಟಿಯರು ಮತ್ತು ಮಾಡೆಲ್ ಗಳನ್ನ ರೇವ್ ಪಾರ್ಟಿ ಆಯೋಜಕರು ಆಂಧ್ರಪ್ರದೇಶದಿಂದ ವಿಮಾನದ ಮೂಲಕ ಕರೆ ತಂದಿದ್ದರು ಎನ್ನಲಾಗಿದೆ.
ಒಂದು ದಿನದ ರೇವ್ ಪಾರ್ಟಿ ಗಾಗಿ 50 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಯನ್ನು ಅರೆಂಜ್ ಮಾಡಿದ್ದ ಫಾರ್ಮ್ ಹೌಸ್ ಗೋಪಾಲ ರೆಡ್ಡಿ ಎನ್ನುವವರ ಮಾಲಿಕತ್ವದಲ್ಲಿದೆ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದ ಎಂಎಲ್ಎ ಒಬ್ಬರಿಗೆ ಸೇರಿದ ಮರ್ಸಿಡಿಸ್ ಬೆಂಜ್ ಕಾರು ಮತ್ತು ಪಾಸ್ ಪೋರ್ಟ್ ಪೊಲೀಸರ ಕೈವಶವಾಗಿದೆ ಎಂಬುದಾಗಿ ಏಷ್ಯಾನೆಟ್ ವರದಿ ಮಾಡಿದೆ. 15ಕ್ಕೂ ಹೆಚ್ಚು ದುಬಾರಿ ಕಾರುಗಳು ಪಾರ್ಕಿಂಗ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.