Harshika Poonacha: ಪ್ರಜ್ವಲ್ ರೇವಣ್ಣ (Prajwal Revanna) ಲೈಂಗಿಕ ಹಗರಣ ಆರೋಪ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ವಿಚಾರಗಳು, ವಿಡಿಯೋಗಳು ಎಲ್ಲೆಡೆ ವೈರಲ್ ಆದಮೇಲೆ ಪ್ರಜ್ವಲ್ ವಿರುದ್ಧ ಈಗಾಗಲೇ ಒಂದಷ್ಟು ದೂರುಗಳು ದಾಖಲಾಗಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನುವ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿಷಯ ಹೊರಬಂದ ಮೇಲೆ ಒಂದಷ್ಟು ಜನ ಸಿನಿಮಾ ನಟರು ಇದರ ವಿರುದ್ಧ ತಮ್ಮ ದನಿಯನ್ನು ಎತ್ತಿದ್ದಾರೆ. ಲೋಕಸಭಾ ಚುನಾವಣೆ ವೇಳೆಯಲ್ಲಿ ಹೊರಬಂದಿರುವ ಅಶ್ಲೀಲ ವಿಡಿಯೋ ಪ್ರಕರಣ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ತೆಲುಗಿನ ನಟಿ, ನಿರೂಪಕಿ ರಶ್ಮಿ ಗೌತಮ್ (Rashmi Gautam) ಈ ವಿಷಯಕ್ಕೆ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇನ್ನು ಬಾಲಿವುಡ್ ನಟಿ ಸ್ವರ ಭಾಸ್ಕರ್ ಹಾಗೂ ದಕ್ಷಿಣದ ಜನಪ್ರಿಯ ನಟಿ ಕಸ್ತೂರಿ (Kasturi) ನೇರವಾಗಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈಗ ಇದೇ ವಿಚಾರವಾಗಿ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಟ್ವಿಟರ್ ನಲ್ಲಿ ಪೋಸ್ಟ್ ಒಂದನ್ನ ಶೇರ್ ಮಾಡಿಕೊಂಡಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಮಾಡಿದ ಪೋಸ್ಟ್ ಈಗ ವೈರಲಾಗುತ್ತಿದೆ.
ನಟಿಯು ತಮ್ಮ ಪೋಸ್ಟ್ ನಲ್ಲಿ, ದುರದೃಷ್ಟವಶಾತ್ ವೈರಲ್ ಆಗುತ್ತಿರುವ 2976 ವಿಡಿಯೋಗಳಲ್ಲಿ ಒಂದನ್ನು ನಾನು ನೋಡಿದೆ. ನಿಜಕ್ಕೂ ಅದನ್ನ ನೋಡೋದು ಒಂದು ನೋವಿನ ಸಂಗತಿಯಾಗಿದೆ. ವೀಡಿಯೋಗಳು ಕಾನೂನು ಬದ್ಧ ಮತ್ತು ನೈಜ ವಾಗಿದ್ದರೆ ಅಂತಹ ಹೀನ ಕೃತ್ಯಗಳನ್ನು ಸೃಷ್ಟಿಸಿದವರನ್ನು ದೇಶದ ಕಾನೂನಿನ ಪ್ರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹರ್ಷಿಕಾ ಅವರು ಆಗ್ರಹಿಸಿದ್ದಾರೆ.
ಆ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರ ಬಗ್ಗೆ ನನಗೆ ಬಹಳ ನೋವಾಗುತ್ತಿದೆ. ಅವರೆಲ್ಲರೂ ಸಭ್ಯ ಮತ್ತು ಸಾಮಾನ್ಯ ಕುಟುಂಬದ ಮಹಿಳೆಯರ ಹಾಗೆ ಕಾಣುತ್ತಾರೆ. ಈ ಸಂತ್ರಸ್ಥರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿರುವ ಹರ್ಷಿಕಾ ಅವ್ರು ಕೊನೆ ಪಕ್ಷ ಅಲ್ಲಿರುವ ಮಹಿಳೆಯರ ಮುಖವನ್ನು ಬ್ಲರ್ ಮಾಡಬೇಕಾಗಿತ್ತು ಎಂದಿದ್ದಾರೆ.
ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರುಗೊಳ್ಳುತ್ತಾರೆ, ಜನ ಅವರನ್ನು ಯಾವ ದೃಷ್ಟಿಯಲ್ಲಿ ನೋಡಬಹುದು ಅನ್ನೋದನ್ನ ವಿವರಿಸಿ ಹೇಳಬೇಕಾಗಿಲ್ಲ. ಅವರ ಕುಟುಂಬ ಮತ್ತು ಮಕ್ಕಳ ಬಗ್ಗೆ ಏನಾದ್ರೂ ಯೋಚನೆ ಮಾಡಿದ್ದೀರಾ ಎಂದಿರುವ ಹರ್ಷಿಕಾ, ಆ ಮಹಿಳೆಯರು ಈಗ ಅನುಭವಿಸುತ್ತಿರುವ ಮಾನಸಿಕ ನೋವು ಎಂತಹುದು ಎನ್ನುವುದನ್ನು ಆಲೋಚಿಸಿ ಎಂದು ತಮ್ಮ ಪೋಸ್ಟ್ ನಲ್ಲಿ ಕಳಕಳಿಯನ್ನ ವ್ಯಕ್ತಪಡಿಸಿದ್ದಾರೆ.