Kannada Serials: ಕನ್ನಡ ಕಿರುತೆರೆ ಅಂದ ಕೂಡ್ಲೇ ಪ್ರೇಕ್ಷಕರಿಗೆ ಮೊದಲು ನೆನಪಾಗೋದು ಸೀರಿಯಲ್ ಗಳು (Kannada Serials). ಖಾಸಗಿ ವಾಹಿನಿಗಳಲ್ಲಿ ಮನರಂಜನೆಯ ಬಹಳ ದೊಡ್ಡ ಮೂಲ ಯಾವುದು ಅಂದ್ರೆ ಸೀರಿಯಲ್ ಗಳು ಅಂತ ಅನುಮಾನ ಇಲ್ಲದೇ ಹೇಳಬಹುದು. ಸೀರಿಯಲ್ ಗಳಲ್ಲಿ ಬಹುತೇಕ ಎಲ್ಲವೂ ಸಹಾ ಮಹಿಳಾ ಪ್ರಧಾನ ಕಥೆಯನ್ನೇ ಒಳಗೊಂಡಿದೆ ಅನ್ನೋದಂತೂ ಪ್ರತ್ಯೇಕವಾಗಿ ಹೇಳೋ ಅವಶ್ಯಕತೆ ಇಲ್ಲ. ಮಹಿಳೆಯರೇ ನಾಯಕಿಯರು, ಮಹಿಳೆಯರೇ ವಿಲನ್ ಗಳು (Lady Villains), ಇಲ್ಲಿ ಹೀರೋಗಳು ಅನ್ನೋರು ಕೇವಲ ನಾಮಕಾವಸ್ಥೆ ಅಂತ ಹೇಳಿದ್ರೆ ತಪ್ಪಂತೂ ಆಗಲ್ಲ.
ಕಿರುತೆರೆಯಲ್ಲಿ ಪ್ರಸಾರವಾಗುವ ಸೀರಿಯಲ್ ಗಳಿಗೆ ಮಹಿಳಾ ವೀಕ್ಷಕರೇ ಹೆಚ್ಚಾಗಿರುವುದರಿಂದ ಅವರನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಇಷ್ಟ ಆಗೋ ರೀತಿಯಲ್ಲೇ ಸೀರಿಯಲ್ ಗಳನ್ನು ಮಾಡಲಾಗುತ್ತಿದೆ. ಅನೇಕರು ಸೀರಿಯಲ್ ಗಳನ್ನು ತಮ್ಮ ಜೀವನದ ಒಂದು ಭಾಗವನ್ನೇ ಮಾಡಿಕೊಂಡಿದ್ದಾರೆ. ಅದು ಮಾತ್ರವೇ ಅಲ್ಲದೇ ಅನೇಕರು ಸೀರಿಯಲ್ ಗಳನ್ನು ಕೂಡಾ ತಮ್ಮದೇ ಮನೆಯ ಕಥೆಯೇನೋ ಎನ್ನುವಂತೆ ನೋಡುತ್ತಾರೆ. ಮಹಿಳೆಯರು ಪರಸ್ಪರ ಇದರ ಬಗ್ಗೆ ಚರ್ಚೆಗಳನ್ನು ಸಹಾ ಮಾಡುತ್ತಾರೆ.
ಎಲ್ಲಾ ಸೀರಿಯಲ್ ಗಳಲ್ಲೂ ಸಾಮಾನ್ಯ ವಿಷಯ ಏನಂದ್ರೆ ಇದ್ರಲ್ಲಿ ಪುರುಷ ಪಾತ್ರಗಳಿಗೆ ತಮ್ಮ ತಾಯಿ, ಹೆಂಡತಿ, ಚಿಕ್ಕಮ್ಮ, ಅತ್ತೆ ತಂಗಿ ಅಥವಾ ಅಕ್ಕನಂತಹ ಪಾತ್ರಗಳು ಮಾಡುವಂತಹ ಕುತಂತ್ರಗಳು, ಹೆಣೆಯುವ ತಂತ್ರಗಳು ಯಾವುದೂ ಕೂಡಾ ಗೊತ್ತೇ ಆಗೋದಿಲ್ಲವೇನೋ ಅನ್ನುವಷ್ಟು ಅಮಾಯಕರು ಅಥವಾ ಮೂರ್ಖರ ಹಾಗೆ ತೋರಿಸಲಾಗುತ್ತೆ. ಕೆಲವು ಸೀರಿಯಲ್ ಗಳಲ್ಲಂತೂ ಇಬ್ಬರು, ಮೂವರು ಲೇಡಿ ವಿಲನ್ ಗಳು ಇರ್ತಾರೆ.
ಸದ್ಯಕ್ಕೆ ಟಾಪ್ ಸೀರಿಯಲ್ ಗಳಾಗಿರೋ ಶ್ರೀರಸ್ತು ಶುಭಮಸ್ತು ವಿನಲ್ಲಿ ಶಾರ್ವರಿ ಮತ್ತು ದೀಪಿಕಾ, ಸೀತಾ ರಾಮ ಸೀರಿಯಲ್ ನಲ್ಲಿ ಭಾರ್ಗವಿ, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ರಾಜಿ, ಕೌಸಲ್ಯ, ಅಮೃತಧಾರೆಯಲ್ಲಿ ಶಕುಂತಲಾ ದೇವಿ ಹೀಗೆ ಎಲ್ಲಾ ಸೀರಿಯಲ್ ಗಳಲ್ಲಿ ನಾಯಕ (Serial Hero) ಅನ್ನೋನು ಹೆಸರಿಗೆ ಮಾತ್ರ ನಾಯಕನಾಗಿದ್ದಾನೆ ಹೊರತೂ ಕಥೆಯನ್ನು ನಡೆಸೋರು ಮಾತ್ರ ಲೇಡಿ ವಿಲನ್ ಗಳೇ ಆಗಿರ್ತಾರೆ. ಎಲ್ಲಾ ಸೀರಿಯಲ್ ಗಳಲ್ಲೂ ಲೇಡಿ ವಿಲನ್ ಗಳ ಕುತಂತ್ರ ಒಂದೇ ತರ ಇದ್ರು ಕೂಡಾ ಪ್ರೇಕ್ಷಕರು ಇಷ್ಟಪಟ್ಟು ನೋಡೋದೇ ಒಂದು ಅಚ್ಚರಿಯ ವಿಚಾರ.