RCB v/s CSK ಪಂದ್ಯದ ವೇಳೆ ಯುವಕನಿಗೆ ಲವ್ ಪ್ರಪೋಸ್ ಮಾಡಿದ ಯುವತಿ: ವೈರಲ್ ಆಯ್ತು ವೀಡಿಯೋ
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಬುಧವಾರ ನಡೆದ RCB v/s CSK ಪಂದ್ಯ ವಿಶೇಷವಾಗಿತ್ತು. ಒಂದೆಡೆ ಈ ಮ್ಯಾಚ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಪಂದ್ಯವಾಗಿತ್ತು. ಏಕೆಂದರೆ ಆರ್ ಸಿ ಬಿ ಹದಿಮೂರು ರನ್ ಗಳಿಂದ ಸಿ ಎಸ್ ಕೆ ತಂಡಕ್ಕೆ ಸೋಲಿನ ರುಚಿಯನ್ನು ನೋಡುವಂತೆ ಮಾಡಿದೆ. ತಮ್ಮ ಅಭಿಮಾನ ತಂಡದ ಗೆಲುವು ಆರ್ ಸಿ ಬಿ ಅಭಿಮಾನಿಗಳಿಗೆ ಖುಷಿಯನ್ನು ನೀಡುವಾಗಲೇ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಘಟನೆ ಕೂಡಾ ಆರ್ ಸಿ ಬಿ ಅಭಿಮಾನಿಗಳು ಮಾತ್ರವೇ ಅಲ್ಲದೇ ಎಲ್ಲರ ಗಮನವನ್ನು ಸೆಳೆದಿದೆ.
ಹೌದು, ಪಂದ್ಯ ನಡೆಯುವ ವೇಳೆಯಲ್ಲಿ ಒಂದು ಅಪರೂಪದ ಪ್ರೇಮ ಪ್ರಸ್ತಾಪಕ್ಕೆ ಕ್ರೀಡಾಂಗಣ ಸಾಕ್ಷಿಯಾಗಿದೆ. ಕ್ರಿಕೆಟ್ ಪಂದ್ಯಗಳು ನಡೆಯುವ ವೇಳೆಯಲ್ಲಿ ಹುಡುಗನೊಬ್ಬ ತಾನು ಇಷ್ಟ ಪಟ್ಟ ಹುಡುಗಿಗೆ ಲವ್ ಪ್ರಪೋಸ್ ಮಾಡಲು ಮೊಣಕಾಲೂರಿ ಕೂರುವುದನ್ನು ನಾವು ಈಗಾಗಲೇ ಹಲವು ಸಲ ನೋಡಿದ್ದೇವೆ. ಆದರೆ ಈ ಬಾರಿ ಸ್ಟೋರಿಯಲ್ಲಿ ಟ್ವಿಸ್ಟ್ ಎನ್ನುವಂತೆ ಹುಡುಗಿಯೊಬ್ಬಳು ಮೊಣಕಾಲೂರಿ ತಾನು ಇಷ್ಟ ಪಟ್ಟ ಯುವಕನಿಗೆ ಲವ್ ಪ್ರಪೋಸ್ ಮಾಡಿದ್ದಾಳೆ.
ಆರ್ ಸಿ ಬಿ ಜೆರ್ಸಿ ಧರಿಸಿದ್ದ ಬಾಯ್ ಫ್ರೆಂಡ್ ಮುಂದೆ ಮೊಣಕಾಲೂರಿ ಕುಳಿತ ಯುವತಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದಾಳೆ. ಯುವಕ ಆಕೆಯ ಪ್ರಪೋಸ್ ಗೆ ಎಸ್ ಹೇಳಿದ ಕೂಡಲೇ ಯುವತಿ ಆತನ ಬೆರಳಿಗೆ ಉಂಗುರವನ್ನು ಹಾಕಿದ್ದಾಳೆ. ಆ ಸುಂದರ ಕ್ಷಣದಲ್ಲಿ ಇಬ್ಬರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಸುಂದರ ಕ್ಷಣವನ್ನು ಸಂಭ್ರಮಿಸಿದ್ದಾರೆ. ಈ ಜೋಡಿಯ ಫೋಟೋ ಮತ್ತು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ, ಅನೇಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ.