Cinema News : ಟಾಲಿವುಡ್ (Tollywood) ಅಥವಾ ತೆಲುಗು ಸಿನಿಮಾ ರಂಗದ ಕಡೆಗೆ ಒಂದು ನೋಟ ಹರಿಸಿದಾಗ ಅಲ್ಲಿ ತೆಲುಗು ನಟಿಯರಿಗಿಂತ ಕನ್ನಡದ ನಟಿಯರದ್ದೇ ಹವಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕನ್ನಡದಿಂದ ತೆಲುಗು ಸಿನಿಮಾ ರಂಗಕ್ಕೆ ಹಾರಿದ ನಟಿಯರ ನಡುವೆಯೇ ದೊಡ್ಡ ಸ್ಪರ್ಧೆಯೊಂದು ಏರ್ಪಟ್ಟಿದೆ ಅನ್ನೋದು ಸಹಾ ಸತ್ಯ. ಅದ್ರಲ್ಲೂ ಈಗಂತೂ ಶ್ರೀಲೀಲಾ (Sreeleela) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಡುವೆ ಭರ್ಜರಿ ಪೈಪೋಟಿ ಇದೆ.
ಈಗ ಇದಕ್ಕೆ ಸಾಕ್ಷಿ ಎನ್ನುವ ಹಾಗೆ ಶ್ರೀಲೀಲಾ ನಾಯಕಿಯಾಗಬೇಕಿದ್ದ ಸಿನಿಮಾವೊಂದರ ಅವಕಾಶ ನಟಿ ಕೈ ಜಾರಿದ್ದು, ಅದು ರಶ್ಮಿಕಾ ಮಂದಣ್ಣ ಪಾಲಾಗಿದೆ. ಹೌದು ಮಾಸ್ ಮಹಾರಾಜ ಖ್ಯಾತಿ ನಟ ರವಿತೇಜ (Raviteja) ನಿರ್ದೇಶಕ ಗೋಪಿಚಂದ್ ಮಲಿನೇನಿ (Gopichand Malineni) ಅವರ ಹೊಸ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದು ಈಗಾಗಲೇ ಅಧಿಕೃತ ಘೋಷಣೆಯಾಗಿದೆ.
ಈ ಸಿನಿಮಾದಲ್ಲಿ ರವಿತೇಜ ಜೊತೆಗೆ ಶ್ರೀಲೀಲಾ ನಾಯಕಿ ಎಂದು ಸುದ್ದಿಗಳಾಗಿತ್ತು. ಈ ಹಿಂದೆ ರವಿತೇಜ ಅವರ ಧಮಾಕ (Dhamaka) ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡು, ಇವರ ಜೋಡಿ ಭರ್ಜರಿ ಸಕ್ಸಸ್ ಕಂಡಿತ್ತು. ಅದೇ ಹಿನ್ನೆಲೆಯಲ್ಲಿ ಈ ಹೊಸ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ ಎನ್ನುವ ಸುದ್ದಿ ಹರಿದಾಡಿ ಸದ್ದು ಮಾಡಿತ್ತು.
ಆದರೆ ಈಗ ಇಲ್ಲಿ ಬದಲಾವಣೆ ಆಗಿದೆ. ಹೊಸ ಸಿನಿಮಾಕ್ಕೆ ಹೊಸ ಜೋಡಿ ಇರಲೆಂದು ನಿರ್ಧರಿಸಿದ ಚಿತ್ರತಂಡ ಪುಷ್ಪ ಸಿನಿಮಾ ಖ್ಯಾತಿಯ ನಟಿ ರಶ್ಮಿಕಾರನ್ನು ರವಿತೇಜ ಸಿನಿಮಾದಲ್ಲಿ ನಾಯಕಿಯನ್ನಾಗಿ ಫೈನಲ್ ಮಾಡಿದ್ದು, ಶ್ರೀಲೀಲಾ ಬದಲಿಗೆ ರಶ್ಮಿಕಾ ಆ ಜಾಗಕ್ಕೆ ಬಂದಿದ್ದಾರೆ. ಅಲ್ಲದೇ ರವಿತೇಜ ಜೊತೆಗೆ ಸಹಾ ರಶ್ಮಿಕಾಗೆ ಇದು ಮೊದಲ ಸಿನಿಮಾ ಆಗಿದೆ.