KGF ಸಿನಿಮಾ ಅಂಶಗಳ ಕಾಪಿ ಪುಷ್ಪ: ಸಿಟ್ಟಿನಿಂದ ಹೋಲಿಕೆಗಳ ಪಟ್ಟಿಯನ್ನೇ ನೀಡಿದ ನೆಟ್ಟಿಗರು
ಟಾಲಿವುಡ್ ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಕೂಡಾ ಒಂದಷ್ಟು ಜನ ಕನ್ನಡಿಗರಿಗೆ ಈ ಸಿನಿಮಾದ ಬಗ್ಗೆ ಅಸಮಾಧಾನ ಖಂಡಿತ ಇದೆ. ಇದಕ್ಕೆ ಹಲವು ಕಾರಣಗಳಿಗೆ. ಬಿಡುಗಡೆಗೆ ಮುನ್ನ ತೆಲುಗಿನ ನಿರ್ದೇಶಕರೊಬ್ಬರು ಒಂದು ಪುಷ್ಪ ಹತ್ತು ಕೆಜಿಎಫ್ ಗೆ ಸಮ ಎಂದು ಹೇಳಿದ್ದು, ಪುಷ್ಪ ಕನ್ನಡದಲ್ಲಿ ಡಬ್ ಆದರೂ ತೆಲುಗಿನಲ್ಲೇ ಬಿಡುಗಡೆ ಆಗಿದ್ದು ಹಾಗೂ ನಟಿ ರಶ್ಮಿಕಾ ಕನ್ನಡದಲ್ಲಿ ತನ್ನ ಪಾತ್ರಕ್ಕೆ ಡಬ್ ಮಾಡದೇ ಇದ್ದಿದ್ದು ಹೀಗೆ ಕೆಲವು ಪ್ರಮುಖ ಕಾರಣಗಳನ್ನು ನಾವು ಇಲ್ಲಿ ಹೇಳಬಹುದಾಗಿದೆ.
ಆದರೆ ಹೆಚ್ಚು ಪರಿಣಾಮ ಬೀರಿದ ಕಾರಣ ಪುಷ್ಪ ಸಿನಿಮಾವನ್ನು ಕೆಜಿಎಫ್ ಗೆ ಹೋಲಿಕೆ ಮಾಡಿ ಕಾಮೆಂಟ್ ಮಾಡಿದ್ದು. ಸರಿ ಪುಷ್ಪ ಬಿಡುಗಡೆ ಆಗಿ ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆ ಆಗಿ, ಈಗ ಓಟಿಟಿ ಗೆ ಕೂಡಾ ಪ್ರವೇಶ ನೀಡಿದೆ. ಇನ್ನು ಓಟಿಟಿಯಲ್ಲಿ ಸಿನಿಮಾ ನೋಡಿದ ಮಂದಿ ಸಿನಿಮಾ ಕಥೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಾ, ಮತ್ತೊಮ್ಮೆ ಪುಷ್ಪ ಸಿನಿಮಾವನ್ನು ಭರ್ಜರಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಕೆಜಿಎಫ್ ಮುಂದೆ ಪುಷ್ಪ ಅಷ್ಟಿಲ್ಲ ಎನ್ನುವಂತೆ ಪೋಸ್ಟ್ ಗಳನ್ನು ಹಾಕಿದ್ದಾರೆ.
ಕೆಜಿಎಫ್ ನಲ್ಲಿ ಬಡಕುಟುಂಬದ ಹುಡುಗ ಹೇಗೆ ಡಾನ್ ಆದ ಎನ್ನುವ ಕಥೆಯಿದೆ, ಇದರಲ್ಲಿ ಚಿನ್ನದ ಗಣಿಯು ಕಥಾಹಂದರದ ಪ್ರಮುಖ ಭಾಗವಾಗಿದೆ, ಮನರಂಜನೆ ವಿಷಯದಲ್ಲಿ ಕೆಜಿಎಫ್ ಬರೆದಿರುವ ದಾಖಲೆ ಸಾಕ್ಷಿಯಾಗಿದೆ. ಇನ್ನು ಪುಷ್ಪ ಸಿನಿಮಾದಲ್ಲಿ ಬಡ ಕುಟುಂಬದ ಹುಡುಗ ರಕ್ತ ಚಂದನ ಕಳ್ಳ ಸಾಗಾಣಿಕೆ ಮೂಲಕ ಹೇಗೆ ಡಾನ್ ಆದ ಎನ್ನುವ ಕಥಾ ಹಂದರವನ್ನು ಹೊಂದಿದೆ ಎನ್ನುವುದು ಸಿನಿಮಾ ನೋಡಿದವರಿಗೆ ಈಗಾಗಲೇ ಅರ್ಥವಾಗಿದೆ. ಈಗ ಇದನ್ನೇ ನೆಟ್ಟಿಗರು ಹೋಲಿಕೆ ಮಾಡಲು ತೊಡಗಿದ್ದಾರೆ.
ಪುಷ್ಪ ಸಿನಿಮಾ ಬಿಡುಗಡೆ ಆದಾಗ ಕೇಳಿ ಬಂದ ಮಾತುಗಳು, ಈಗ ಓಟಿಟಿಗೆ ಬಂದ ಮೇಲೆ ಮತ್ತೊಮ್ಮೆ ಸದ್ದು ಮಾಡಿದೆ. ನೆಟ್ಟಿಗರು ಈಗ ಪುಷ್ಪ ತಂಡದವರು ಕೆಜಿಎಫ್ ಚಿತ್ರವನ್ನು ನೋಡಿ ಕಾಪಿ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರಂತೂ ಕೆಜಿಎಫ್ ಸಿನಿಮಾ ಕಥೆಯನ್ನು ಆಧರಿಸಿಯೇ ಪುಷ್ಪ ಸಿನಿಮಾ ಕಥೆ ಸಿದ್ಧವಾಗಿದೆ ಎಂದೂ ಸಹಾ ಬರೆದುಕೊಂಡಿದ್ದಾರೆ. ಇನ್ನು ಎರಡು ಸಿನಿಮಾಗಳ ಸಾಮ್ಯತೆ ಬಗ್ಗೆ ಸಹಾ ಬರೆಯಲಾಗಿದೆ.
ಕೆಜಿಎಫ್ ಹಾಗೂ ಪುಷ್ಪ ನಡುವಿನ ಸಾಮ್ಯತೆ ಗಳ ಬಗ್ಗೆ ಕೆಲವರು, ಇಲ್ಲಿ ಕೋಲಾರದ ಚಿನ್ನದ ಗಣಿ, ಅಲ್ಲಿ ರಕ್ತ ಚಂದನ, ಇಲ್ಲಿ ನಾಲ್ಕು ಗ್ಯಾಂಗ್ ಅಲ್ಲೂ ನಾಲ್ಕು ಗ್ಯಾಂಗ್, ಇಲ್ಲಿ ಎರಡು ಭಾಗ ಅಲ್ಲೂ ಎರಡೂ ಭಾಗ, ಇಲ್ಲಿ ನಾಯಕನಿಗೆ ತಂದೆ ಇಲ್ಲ, ಅಲ್ಲೂ ನಾಯಕನಿಗೆ ತಂದೆ ಇಲ್ಲ, ಇಲ್ಲಿ ಸಂಜಯ್ ದತ್ ಅಲ್ಲಿ ಫಹಾದ್ ಫಾಸಿಲ್ ಎಂದು ಬರೆದುಕೊಂಡು ಕೆಜಿಎಫ್ ಅನ್ನು ಪುಷ್ಪ ಹೇಗೆಲ್ಲಾ ಹೋಲುತ್ತದೆ ಎಂದಿದ್ದಾರೆ. ಆದರೆ ಪುಷ್ಪ ಅಭಿಮಾನಿಗಳು ಮಾತ್ರ ಇದನ್ನು ಒಪ್ಪಲು ಸಿದ್ಧ ಇಲ್ಲ.