ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಈ ಬಾರಿ ಐಪಿಎಲ್ 2022 ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಗೆಲುವಿಗಾಗಿ ಕಾದಿದೆ. ತಂಡದ ಬ್ಯಾಟ್ಸ್ ಮನ್ ಗಳು ಉತ್ತಮವಾದ ಪ್ರದರ್ಶನವನ್ನು ನೀಡಿದರೂ ಸಹಾ, ಬೌಲಿಂಗ್ ವಿಭಾಗದಲ್ಲಿ ಮಾತ್ರ ಬಲಹೀನತೆ ಎದ್ದು ಕಾಣುತ್ತಿದೆ. ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡವು ಸತತ ಸೋಲುಗಳಿಂದ ಸೋತು ಸುಣ್ಣವಾಗಿದ್ದು, ಅಂಕಪಟ್ಟಿಯಲ್ಲಿ ಕಡೆಯ ಸ್ಥಾನವನ್ನು ಪಡೆದುಕೊಂಡಿರುವುದು ಸಹಜವಾಗಿಯೇ ಈ ತಂಡ ಅಭಿಮಾನಿಗಳಿಗೆ ಈ ಬಾರಿ ಸಾಕಷ್ಟು ನಿರಾಸೆಯನ್ನು ಉಂಟು ಮಾಡಿದೆ.
ಮುಂಬೈ ತಂಡದ ಸ್ಟಾರ್ ಗಳು ಎನಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್ ಎಲ್ಲರನ್ನೂ ತಂಡ ಈ ಬಾರಿ ಕಳೆದುಕೊಂಡಿದೆ. ಅಲ್ಲದೇ ಐಪಿಎಲ್ ಮೆಗಾ ಆಕ್ಷನ್ ನಲ್ಲಿ ಈ ಆಟಗಾರರ ಬದಲಿಗೆ ಸೂಕ್ತ ಆಟಗಾರರನ್ನು ಖರೀದಿ ಮಾಡುವಲ್ಲಿಯೂ ವಿಫಲವಾಗಿದೆ. ಈಗ ಇದೇ ವಿಚಾರವಾಗಿ ಆಸ್ಟ್ರೇಲಿಯಾ ತಂಡದ ಮಾಜಿ ಆಲ್ ರೌಂಡರ್ ಹಾಗೂ ಡೆಲ್ಲಿ ಕ್ಯಾಪಿಟಲ್ ತಂಡದ ಸಹಾಯಕ ಕೋಚ್ ಆಗಿರುವ ಶೇನ್ ವಾಟ್ಸನ್ ಅವರು ಮಾತನಾಡಿದ್ದಾರೆ.
ಶೇನ್ ವಾಟ್ಸನ್ ಅವರು ಮಾತನಾಡುತ್ತಾ, ಹರಾಜಿನಲ್ಲಿ ಮುಂಬೈ ತಂಡವು ಇಶಾನ್ ಕಿಶನ್ ಅವರನ್ನು 15.25 ಕೋಟಿ ರೂಗಳನ್ನು ನೀಡಿ ಖರೀದಿ ಮಾಡುವ ಅವಶ್ಯಕತೆ ಇರಲಿಲ್ಲ. ತಂಡವು ಅಷ್ಟು ಹಣವನ್ನು ಖರ್ಚು ಮಾಡಿ ದೊಡ್ಡ ತಪ್ಪನ್ನು ಮಾಡಿದೆ ಎಂದು ಹೇಳಿದ್ದಾರೆ. ಇಶಾನ್ ಕಿಶನ್ ಗಾಗಿ ಮುಂಬೈ ತಂಡವು ಹಣದ ಹೊಳೆಯನ್ನು ಹರಿಸುವ ಮೂಲಕ ಸೂಕ್ತ ಬದಲಿ ಆಟಗಾರರನ್ನು ಖರೀದಿ ಮಾಡುವಲ್ಲಿ ವಿಫಲವಾಯಿತು, ಒಂದು ಉತ್ತಮ ಅವಕಾಶವನ್ನು ಕಳೆದುಕೊಂಡಿತು ಎನ್ನುವ ಮಾತನ್ನು ವಾಟ್ಸನ್ ಅವರು ಹೇಳಿದ್ದಾರೆ.
ಇನ್ನು ಅಂಕ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಸ್ಥಾನದಲ್ಲಿ ಇರುವುದು ನನಗೆ ಅಚ್ಚರಿಯನ್ನು ಉಂಟು ಮಾಡಿಲ್ಲ. ಏಕೆಂದರೆ ತಂಡವು ಹರಾಜಿನಲ್ಲೇ ಆ ಘಾ ತ ಅನುಭವಿಸಿದೆ. ಇಶಾನ್ ಕಿಶನ್ ಒಳ್ಳೆಯ ಆಟಗಾರ, ಪ್ರತಿಭಾನ್ವಿತ ಆಟಗಾರ ಆದರೆ ಆತನ ಮೇಲೆ ಅಷ್ಟೊಂದು ಹಣವನ್ನು ಖರ್ಚು ಮಾಡುವ ಅಗತ್ಯ ಇರಲಿಲ್ಲ ಎನ್ನುವ ಮಾತನ್ನು ಶೇನ್ ವಾಟ್ಸನ್ ಹೇಳಿದ್ದಾರೆ. ಈ ಬಾರಿ ಮುಂಬೈ ಇಂಡಿಯನ್ಸ್ ನಾಕೌಟ್ ಹಂತಕ್ಕೆ ಬರುವುದು ಸಹಾ ಬಹಳ ಕಷ್ಟ ಎನಿಸಿದೆ.